ಇಂದಿನಿಂದ ವಿಶ್ವವಿಖ್ಯಾತ ಜಗನ್ನಾಥ ರಥ ಯಾತ್ರೆ ಆರಂಭ
ಒಡಿಶಾದ ಪುರಿಯಲ್ಲಿ ಪ್ರತಿವರ್ಷ ನಡೆಯುವ ಒಂಬತ್ತು ದಿನಗಳ ಜಗನ್ನಾಥ ಯಾತ್ರೆ ಸಾಕಷ್ಟು ಬಿಗಿ ಭದ್ರತೆಗಳ ನಡುವೆ ಇಂದಿನಿಂದ ಆರಂಭವಾಗಿದೆ.
ಭುವನೇಶ್ವರ: ಒಡಿಶಾದ ಪುರಿಯಲ್ಲಿ ಪ್ರತಿವರ್ಷ ನಡೆಯುವ ಒಂಬತ್ತು ದಿನಗಳ ಜಗನ್ನಾಥ ಯಾತ್ರೆ ಸಾಕಷ್ಟು ಬಿಗಿ ಭದ್ರತೆಗಳ ನಡುವೆ ಇಂದಿನಿಂದ ಆರಂಭವಾಗಿದೆ.
ಜಗನ್ನಾಥ ದೇವರು, ಬಾಲಭದ್ರ ಮತ್ತು ದೇವಿ ಸುಭದ್ರಾ ಮೂರ್ತಿಯನ್ನು ಮೂರು ಮರದ ರಥದಲ್ಲಿ ಭಕ್ತರು ಎಳೆಯುವುದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಜಗನ್ನಾಥ ದೇವಳದ ಆವರಣದಲ್ಲಿ ನೆರೆದಿದ್ದಾರೆ.
12ನೇ ಶತಮಾನದ ಜಗನ್ನಾಥ ದೇವಾಲಯದ ಮೂರು ಮೂರ್ತಿಗಳನ್ನು ರಥದಲ್ಲಿ ಕುಳ್ಳಿರಿಸಿ ದೇವಿ ಗುಂಡಿಚಕ್ಕೆ ಕರೆದೊಯ್ಯುವ ವಾರ್ಷಿಕ ಯಾತ್ರೆಯೇ ವಿಶ್ವವಿಖ್ಯಾತ ಪುರಿ ಜಗನ್ನಾಥ ಯಾತ್ರೆ. 9 ದಿನಗಳ ನಂತರ ಬಹುದ ಯಾತ್ರೆ ಅಥವಾ ಮೂರು ಮೂರ್ತಿಗಳನ್ನು ದೇವಸ್ಥಾನಕ್ಕೆ ಹಿಂತಿರುಗಿ ತರುವ ಮೂಲಕ ಜಾತ್ರೆ ಕೊನೆಗೊಳ್ಳುತ್ತದೆ.
ಜಾತ್ರೆಯ ಮತ್ತೊಂದು ಮಹತ್ವವೆಂದರೆ ಎಲ್ಲಾ ಧರ್ಮಗಳ ಜನರು ಮೂರು ಕಿಲೋ ಮೀಟರ್ ಉದ್ದದವರೆಗೆ ನಡೆಯವ ರಥ ಎಳೆಯುವ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.
ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಭಗವಂತ ಜಗನ್ನಾಥನ ಆಶೀರ್ವಾದದಿಂದ ನಮ್ಮ ದೇಶದ ಅಭಿವೃದ್ಧಿ ಹೊಸ ಉತ್ತುಂಗಕ್ಕೇರಲಿ. ಪ್ರತಿಯೊಬ್ಬ ಭಾರತೀಯನೂ ಸಂತೋಷ ಮತ್ತು ಸಮೃದ್ಧಿಯಿಂದ ಬದುಕುವಂತಾಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.