ಸಾವಿರಕ್ಕೂ ಹೆಚ್ಚು ರೈತರ ಕೋಟ್ಯಂತರ ರೂ. ಸಾಲ ತೀರಿಸಿದ ಬಿಗ್ ಬಿ!
1,398 ರೈತರು ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದಿದ್ದ 40 ಮಿಲಿಯನ್ ರೂ. ($560,000) ಸಾಲವನ್ನು ಅಮಿತಾಬ್ ಬಚ್ಚನ್ ಪಾವತಿಸಿದ್ದಾರೆ.
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಮಾಜ ಸೇವೆಯಲ್ಲಿ ಸದಾ ನಿರತರಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೀಗ ಕೋಟ್ಯಾಂತರ ರೂ.ಗಳಷ್ಟು ರೈತರ ಸಾಲವನ್ನು ತೀರಿಸುವ ಮೂಲಕ ಸಂಕಷ್ಟದಲ್ಲಿದ್ದ ರೈತರಿಗೆ ಅಮಿತಾಬ್ ನೆರವಾಗಿದ್ದಾರೆ.
ಈ ಬಗ್ಗೆ ಮಂಗಳವಾರ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮಿತಾಬ್, "1,398 ರೈತರು ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದಿದ್ದ 40 ಮಿಲಿಯನ್ ರೂ. ($560,000) ಸಾಲವನ್ನು ಪಾವತಿಸಿರುವುದಾಗಿ ತಿಳಿಸಿದ್ದು, ಇದಕ್ಕೆ ಪ್ರತಿಯಾಗಿ ಬ್ಯಾಂಕ್ 'ಒನ್ ಟೈಮ್ ಸೆಟಲ್ಮೆಂಟ್' ಪ್ರಮಾಣಪತ್ರ ನೀಡಿದೆ. ಈ ಕಾರ್ಯದಿಂದ ನನಗೆ ಆತ್ಮತೃಪ್ತಿ ದೊರೆತಿದೆ" ಎಂದಿದ್ದಾರೆ. ಈ ಮೂಲಕ ತಾವು ಜನಿಸಿದ ರಾಜ್ಯವಾದ ಉತ್ತರಪ್ರದೇಶದ ಸಾವಿರಾರು ರೈತರ ಸಾಲವನ್ನು ಬಿಗ್ ಬಿ ಪಾವತಿಸುವ ಮೂಲಕ ರೈತರ ಜೀವನದಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ.
ಮುಂದುವರೆದು, "ಈ ಪಾವತಿ ಬಗ್ಗೆ ರೈತರಿಗೆ ವೈಯಕ್ತಿಕವಾಗಿ ತಿಳಿಸಿ, ಪ್ರಮಾಣ ಪತ್ರಗಳನ್ನು ನೀಡಲು ಇಚ್ಛಿಸಿದ್ದೇನೆ. ಆದರೆ ಎಲ್ಲಾ ರೈತರನ್ನೂ ಒಮ್ಮೆಗೇ ಮುಂಬೈಗೆ ಕರೆತರುವುದು ಕಷ್ಟವಾದ್ದರಿಂದ, ರೈಲಿನ ಒಂದು ಭುಗಿಯನ್ನು ಬುಕ್ ಮಾಡಲಾಗಿದ್ದು, ಮೊದಲ ಹಂತದಲ್ಲಿ 70 ಮಂದಿ ರೈತರು ಆಗಮಿಸಿ ಬ್ಯಾಂಕ್ ದಾಖಲೆಗಳನ್ನು ಪಡೆಯಲಿದ್ದಾರೆ. ರೈತರು ನವೆಂಬರ್ 26ಕ್ಕೆ ಬರುವ ನಿರೀಕ್ಷೆಯಿದೆ" ಎಂದಿದ್ದಾರೆ.
ಈ ಹಿಂದೆ ಮಹಾರಾಷ್ಟ್ರದ ಮುಂಬೈನ 350 ರೈತರ ಕೃಷಿ ಸಾಲ ಪಾವತಿಸಿದ್ದ ಅಮಿತಾಬ್ ಬಚ್ಚನ್, ಇದೀಗ ಉತ್ತರ ಪ್ರದೇಶದ 1,398 ರೈತರ ಸಾಲದ ಮೊತ್ತ ಪಾವತಿಸಿದ್ದಾರೆ.