ಮುಂಬೈ: ಅನಾರೋಗ್ಯದಿಂದ ನಿನ್ನೆಯಷ್ಟೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ - ಅವರು ಹೊರಟುಹೋದರು.  ರಿಷಿ ಕಪೂರ್ (Rishi Kapoor) ಹೊರಟೇ ಹೋದರು. ನಾನು ಸಂಪೂರ್ಣವಾಗಿ ಕುಸಿದಿದ್ದೇನೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.


COMMERCIAL BREAK
SCROLL TO CONTINUE READING


ಕಳೆದ ಒಂದು ವಾರದಿಂದ ರಿಷಿ ಕಪೂರ್ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ರಾತ್ರಿ ಅವರ ಆರೋಗ್ಯ ಹಠಾತ್ ಹದಗೆಟ್ಟ ನಂತರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ರಿಷಿ ಕಪೂರ್ ತಮ್ಮ 67ನೇ ವಯಸ್ಸಿನಲ್ಲಿ ಎಲ್ಲರನ್ನೂ ಅಗಲಿದ್ದಾರೆ.


ಈ ದುಃಖದ ಸುದ್ದಿಯಿಂದಾಗಿ ಬಾಲಿವುಡ್ ಪ್ರಿಯರಲ್ಲಿ ದುಃಖದ ಅಲೆಯೊಂದು ಹರಡಿತು. ನಿನ್ನೆ ಬಾಲಿವುಡ್ ಹಿರಿಯ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡರು ಮತ್ತು ಇಂದು ಬೆಳಿಗ್ಗೆ ರಿಷಿ ಕಪೂರ್ ಅವರ ನಿರ್ಗಮನದಿಂದಾಗಿ ಇಡೀ ಬಾಲಿವುಡ್ ಚಿತ್ರದ ನಟ ನಟಿಯರ ಜೊತೆಗೆ ಅಪಾರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.


ಜನರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಈ 2020 ಇನ್ನು ಏನೇನನ್ನು ತೋರಿಸಲಿದೆ? ಎಂದು ಬರೆದಿದ್ದರೆ ಇನ್ನೊಬ್ಬರು ಲೆಜೆಂಡ್ಸ್ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿ ರಿಷಿ ಸಾಬ್! ನೀವು ತೊರೆದಿದ್ದೀರಿ ಆದರೆ ಯಾವಾಗಲೂ ನಮ್ಮ ಹೃದಯದಲ್ಲಿರುತ್ತೀರಿ ಎಂದು ಬರೆದಿದ್ದಾರೆ.