`ತಾನಾಜಿ` ಮೇಲೆ ಆರೋಪ ಮಾಡಿ ಟ್ರೊಲ್ ಗೆ ಗುರಿಯಾದ ಸೈಫ್
ಬಾಲಿವುಡ್ ನಟ ಸೈಫ್ ಅಲಿ ಖಾನ್ `ತಾನಾಜಿ` ಮೇಲೆ ಆರೋಪ ಮಾಡಿ ಇದೀಗ ಭಾರಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಅವರ ಹೇಳಿಕೆಯನ್ನು ಪ್ರಶ್ನಿಸಿರುವ ನೆಟ್ಟಿಗರು, ಈ ವಿಷಯ ನೀವು ಈ ಮೊದಲೇ ಯಾಕೆ ಹೇಳಲಿಲ್ಲ? ಎಂದು ಪ್ರಶ್ನಿಸಲಾರಂಭಿಸಿದ್ದಾರೆ.
ನವದೆಹಲಿ: ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಸೈಫ್ ಅಲಿ ಖಾನ್ ಅಭಿನಯದ 'ತಾನಾಜಿ:ದಿ ಅನ್ಸಂಗ್ ವಾರಿಯರ್ ಬಾಕ್ಸ್ ಆಫೀಸ್ ಮೇಲೆ ಜಬರ್ದಸ್ತ್ ಪೈಸಾ ವಸೂಲಿ ಮಾಡುತ್ತಿದೆ. ಈ ಚಿತ್ರದಲ್ಲಿನ ಅಜಯ್ ದೇವಗನ್ ಹಾಗೂ ಸೈಫ್ ಅಲಿ ಖಾನ್ ಅಭಿನಯಕ್ಕೆ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ಸೈಫ್ ಅಲಿ ಖಾನ್ ತಾನಾಜಿ ಮೇಲೆ ಇತಿಹಾಸದ ಸಂಗತಿಗಳನ್ನು ತಿರುಚಿದ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ ದೇಶದ ಕುರಿತು ಅವರು ನೀಡಿರುವ ಹೇಳಿಕೆಗೆ ಅವರು ಭಾರಿ ಟ್ರೋಲ್ ಗೆ ಒಳಗಾಗಿದ್ದಾರೆ.
ಪತ್ರಕರ್ತೆ ಅನುಪಮಾ ಚೋಪಡಾ ಅವರಿಗೆ ನೀಡಲಾಗಿರುವ ಸಂದರ್ಶನದಲ್ಲಿ ಮಾತನಾಡಿರುವ ಸೈಫ್ "ಭಾರತದ ಪರಿಕಲ್ಪನೆಯನ್ನು ಬ್ರಿಟಿಷರು ನೀಡಿದ್ದಾರೆ. ಅದಕ್ಕೂ ಮೊದಲು ಈ ಪರಿಕಲ್ಪನೆ ಇರಲೇ ಇಲ್ಲ ಮತ್ತು ಇದೇ ಸತ್ಯ" ಎಂದು ಹೇಳಿದ್ದಾರೆ. ಆ ಬಳಿಕ ಸೈಫ್ ನೆಟ್ಟಿಗರ ಟ್ರೋಲ್ ಗೆ ಬಾರಿ ಗುರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೇಲೆ ಸೈಫ್ ಗೆ ಉತ್ತರ ನೀಡುತ್ತಿರುವ ನೆಟ್ಟಿಗರು, ಸೈಫ್ ಅವರ ಇತಿಹಾಸ ಜ್ಞಾನವನ್ನು ಪ್ರಶ್ನಿಸುತ್ತಿದ್ದಾರೆ.
ಸೈಫ್ ಗೆ ಉತ್ತರ ನೀಡಿರುವ ಯಾಮಿನಿ ಚತುರ್ವೇದಿ ಹೆಸರಿನ ಬಳಕೆದಾರರೊಬ್ಬರು, "ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಭಾರತದ ಪರಿಕಲ್ಪನೆಯೇ ಇಲ್ಲ ಎಂದಾದಲ್ಲಿ, ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಹೆಸರನ್ನು ಯಾವ ಆಧಾರದ ಮೇಲೆ ಬಳಸಿದ್ದಾರೆ" ಎಂದು ಪ್ರಶ್ನಿಸಿದ್ದಾರೆ. ಸೈಫ್ ಓದಿರುವ ಇತಿಹಾಸದ ಪುಸ್ತಕದ ಮೇಲೆ ತಮಗೆ ಸಂದೇಹವಿದೆ ಎಂದು ಮೊತ್ತೊರ್ವ ಬಳಕೆದಾರ ಬರೆದಿದ್ದಾರೆ. ಸೈಫ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ಬಳಕೆದಾರರು "ಬಾಲಿವುಡ್ ನಲ್ಲಿ ಸೈಫ್ ಅಲಿ ಖಾನ್ ಅವರಂತಹ ಹಲವು ಜನರಿದ್ದು, ಅವರಿಗೆ ಯಾವ ಮಾಹಿತಿ ಇಲ್ಲದಿದ್ದರೂ ಕೂಡ, ಕ್ಯಾಮೆರಾ ಮುಂದೆ ಜ್ಞಾನ ಹಂಚುವಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೇ ಇರುತ್ತಾರೆ" ಎಂದಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಸೈಫ್ ಅಲಿ ಖಾನ್ 'ತಾನಾಜಿ' ಚಿತ್ರದಲ್ಲಿ ತೋರಿಸಿದ್ದು, ಇತಿಹಾಸದ ಭಾಗವೇ ಅಲ್ಲ ಹಾಗೂ ಇತಿಹಾಸದ ಸಂಗತಿಗಳನ್ನು ತಿರುಚಲಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ತುಂಬಾ ರೋಚಕವಾಗಿತ್ತು. ಆದರೆ, ಕೆಲ ಕಾರಣಗಳಿಂದ ನನ್ನಿಂದ ನಿಲುವು ತೆಗೆದುಕೊಳ್ಳಲು ಆಗಲಿಲ್ಲ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇನೆ. ಇತಿಹಾಸ ಏನು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಚಿತ್ರದ ಆರ್ಥಿಕ ಯಶಸ್ಸಿಗಾಗಿ ಇತಿಹಾಸದ ತಪ್ಪು ವ್ಯಾಖ್ಯೆ ಬರೆಯಲಾಗಿದೆ. ಇದಕ್ಕಾಗಿ ಕಬೀರ್ ಖಾನ್ ಜೊತೆ ಅವರು ನಡೆಸಿರುವ ಒಂದು ಮಾತುಕತೆಯನ್ನು ಸೈಫ್ ಹಂಚಿಕೊಂಡಿದ್ದಾರೆ. ಈ ವೇಳೆ ಮಾತನಾಡಿರುವ ಕಬೀರ್ ಖಾನ್, ತಾವು ಹಗುರ ಸ್ಕ್ರಿಪ್ಟ್ ಮತ್ತು ಹಗುರವಾದ ಅಭಿನಯ ಸಹಿಸಿಕೊಳ್ಳಬಲ್ಲೆ. ಆದರೆ, ಚಿತ್ರದ ಆರ್ಥಿಕ ಯಶಸ್ಸಿಗಾಗಿ ಇತಿಹಾಸದ ಸಂಗತಿ ತಿರುಚುವಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿರುವುದನ್ನು ಸೈಫ್ ಉಲ್ಲೇಖಿಸಿದ್ದಾರೆ.
'ತಾನಾಜಿ' ಮೇಲೆ ಆರೋಪ ಮಾಡಿರುವ ಸೈಫ್ ಅಲಿ ಖಾನ್ ಅವರನ್ನು ಇದೀಗ ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದಾರೆ. ಸೈಫ್ ಅವರನ್ನು ಪ್ರಶ್ನಿಸುತ್ತಿರುವ ನೆಟ್ಟಿಗರು, ಈ ಸಂಗತಿಯನ್ನು ಇಷ್ಟೊಂದು ಲೇಟಾಗಿ ಯಾಕೆ ಹೇಳುತ್ತಿರುವಿರಿ? ಮೊದಲೇ ಈ ಕುರಿತು ನೀವು ಯಾಕೆ ಸ್ಪಷ್ಟಪಡಿಸಲಿಲ್ಲ? ಎಂದೂ ಕೂಡ ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ 'ತಾನಾಜಿ' ಚಿತ್ರದ ಮೂಲಕ ಅಜಯ್ ದೇವಗನ್ ಅವರಿಗೆ ಸಿಕ್ಕ ಯಶಸ್ಸು ಸೈಫ್ ಅಲಿ ಖಾನ್ ಅವರಿಗೆ ಸಿಕ್ಕಿಲ್ಲ, ಹೀಗಾಗಿ ಸೈಫ್ ತಮ್ಮ ಹತಾಶೆ ಹೊರಹಾಕುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಇಂದು ನಮ್ಮ ದೇಶ ಸಾಗುತ್ತಿರುವ ದಿಕ್ಕು ಭವಿಷ್ಯದಲ್ಲಿ ಜ್ಯಾತ್ಯಾತೀತ ಪಟ್ಟವನ್ನು ಕಳೆದುಕೊಳ್ಳಬಹುದು. ನಾವು ಇದಕ್ಕಾಗಿ ಹೋರಾಡುತ್ತಿಲ್ಲ ಆದರೆ, ವಿದ್ಯಾರ್ಥಿಗಳು ಮಾತ್ರ ಇದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿ ಪರೋಕ್ಷವಾಗಿ JNU ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಕೆಲ ದಿನಗಳ ಹಿಂದೆ ಇಂತಹುದೇ ಒಂದು ಕೆಲಸ ಮಾಡಿ ಖ್ಯಾತ ನಟಿ ದೀಪಿಕಾ ವಿವಾದ ಎಳೆದುಕೊಂಡಿದ್ದರು ಎನ್ನುವುದು ಇಲ್ಲಿ ಗಮನಾರ್ಹ.