ಬೆಂಗಳೂರು: ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಬಿನಯದ 'ಅಂಜನಿಪುತ್ರ' ಸಿನಿಮಾ ಪ್ರದರ್ಶನ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೋರ್ಟ್‌ ಆದೇಶ ಉಲ್ಲಂಘಿಸಲಾಗಿದೆ ಎಂದು ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಿಟಿ ಸಿವಿಲ್‌ ನ್ಯಾಯಾಲಯ ಪುರಸ್ಕರಿಸಿದ್ದು, ಮುಂದಿನ ವಿಚಾರಣೆಯವರೆಗೂ ಚಿತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ. 


COMMERCIAL BREAK
SCROLL TO CONTINUE READING

40ನೇ ಸಿಟಿ ಸಿವಿಲ್ ನ್ಯಾಯಾಲಯದ ಆದೇಶವಿದ್ದರೂ ಚಿತ್ರ ಪ್ರದರ್ಶನ ಮುಂದುವರಿಸಿದ್ದನ್ನು ಪ್ರಶ್ನಿಸಿ ವಕೀಲ ನಾರಾಯಣಸ್ವಾಮಿ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ಚಿತ್ರ ಪ್ರದರ್ಶನ ತಡೆಯುವ ಸಂಬಂಧ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಜ. 2ರವರೆಗೆ ಪ್ರದರ್ಶನ ತಡೆಯುವಂತೆ ಆಯಾ ಠಾಣೆಯ ಪೊಲೀಸರಿಗೆ ಸೂಚನೆ ನೀಡಬೇಕು’ ಎಂದು ಡಿಜಿಪಿಗೆ ಆದೇಶ ನೀಡಿದೆ. 


‘ಚಿತ್ರದಲ್ಲಿ ವಕೀಲ ಸಮುದಾಯವನ್ನು ಅವಮಾನಿಸುವ ಸಂಭಾಷಣೆಯಿದ್ದು, ಅದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ ಅದು ಪಾಲನೆಯಾಗದಿದ್ದುದರಿಂದ‌ ಚಿತ್ರದ ನಿರ್ದೇಶಕ ಎ.ಹರ್ಷ, ನಿರ್ಮಾಪಕ ಎಂ.ಎನ್‌.ಕುಮಾರ್‌, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು’ ಎಂದು ವಕೀಲ ನಾರಾಯಣಸ್ವಾಮಿ ತಿಳಿಸಿದ್ದಾರೆ.