ಹೊಸದೆಹಲಿ: ಸಂಜಯ್ ದತ್, ಅರ್ಜುನ್ ಕಪೂರ್ ಹಾಗೂ ಕೃತಿ ಸನನ್ ಅಭಿನಯದ ಮತ್ತು ಅಶುತೋಷ್ ಗೊವಾರಿಕರ್ ಅವರಿಂದ ನಿರ್ದೇಶಿಸಲ್ಪಟ್ಟ 'ಪಾಣಿಪತ್' ಚಿತ್ರ ಬಿಡುಗಡೆಯಾಗಿ 5 ದಿನಗಳು ಗತಿಸಿವೆ. ಬಿಡುಗಡೆಗೂ ಮುನ್ನವೇ ಹಲವಾರು ಪ್ರದೇಶಗಳಲ್ಲಿ ವಿವಾದಕ್ಕೆ ಕಾರಣವಾಗಿರುವ ಈ ಚಿತ್ರಕ್ಕೆ ಒಂದೆಡೆ ರಾಜಕೀಯ ಮುಖಂಡರು ನಿಷೇಧಿಸಬೇಕು ಎಂಬ ಬೇಡಿಕೆ ಇಡುತ್ತಿದ್ದರೆ, ಇನ್ನೊಂದೆಡೆ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಈ ಚಿತ್ರ ಪ್ರೇಕ್ಷಕರಿಗೆ ಎಷ್ಟೊಂದು ಇಷ್ಟವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ.


COMMERCIAL BREAK
SCROLL TO CONTINUE READING

ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಕೊಂಚ ನಿರಸವಾಗಿದ್ದರೆ, ವಿಕೆಂಡ್ ನಲ್ಲಿ ಚಿತ್ರ ಗಳಿಕೆ ಮಾಡಿರುವ ಅಂಕಿ-ಅಂಶಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಆದರೆ, ಸೋಮವಾರದಿಂದ ಈ ಚಿತ್ರದ ಗಳಿಕೆಯಲ್ಲಿ ಮತ್ತೊಮ್ಮೆ ಇಳಿಕೆ ದಾಖಲಾಗಿದ್ದು, ದೇಶದ ವಿವಿಧ ಪ್ರದೇಶಗಳಲ್ಲಿ ಈ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಈ ಚಿತ್ರ ತನ್ನ ಅಬ್ಬರ ಮುಂದುವರೆಸಿದೆ.



ಬಾಕ್ಸ್ ಆಫೀಸ್ ಇಂಡಿಯಾ ಅನುಸಾರ ಈ ಚಿತ್ರ ಶುಕ್ರವಾರ 4.12 ಕೋಟಿ ರೂ., ಶನಿವಾರ 5.78 ಕೋಟಿ ರೂ., ರವಿವಾರ 7.78 ಕೋಟಿ ರೂ., ಸೋಮವಾರ 2.50 ಕೋಟಿ ರೂ.ಗಳ ಗಳಿಕೆ ಮಾಡಿದೆ. ಇನ್ನೊಂದೆಡೆ ಮಂಗಳವಾರ ಈ ಚಿತ್ರ 2.25 ಕೋಟಿ ರೂ. ಗಳಿಕೆ ಮಾಡಿದ್ದು, ಚಿತ್ರದ ಗಳಿಕೆ ಒಟ್ಟು 22.25 ಕೋಟಿ ರೂ.ಗೆ ತಲುಪಿದೆ. ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಪ್ರಕಾರ ಈ ಚಿತ್ರದ ಒಟ್ಟು ಗಳಿಕೆ 22.25 ಕೋಟಿ ರೂ. ಎನ್ನಲಾಗಿದೆ.



18ನೇ ಶತಮಾನದಲ್ಲಿ ಭಾರತದಲ್ಲಿ ನಡೆದ ಒಂದು ಯುದ್ಧವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಸದಾಶಿವ್ ರಾವ್ ನೇತೃತ್ವದಲ್ಲಿ ಮರಾಠ ಸಾಮ್ರಾಜ್ಯ ಹಾಗೂ ಆಫ್ಘಾನಿಸ್ತಾನದ ರಾಜ ಅಹಮದ್ ಶಾ ಅಬ್ದಾಲಿ ಸೇನೆಯ ಮಧ್ಯೆ ಜರುಗಿದ ಯುದ್ಧದ ಮೇಲೆ ಆಧಾರಿತವಾಗಿದೆ. ಚಿತ್ರದಲ್ಲಿ ಅರ್ಜುನ್ ಕಪೂರ್, ಸಂಜಯ್ ದತ್, ಕೃತಿ ಸನನ್ ಜೊತೆಗೆ ಮೊನೀಶ್ ಬಹಲ್ ಹಾಗೂ ಜೀನತ್ ಅಮಾನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.