ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾದ ಬೃಹತ್ ಡ್ರಗ್ಸ್ (Drugs) ಜಾಲದಲ್ಲಿ ಸ್ಯಾಂಡಲ್ ವುಡ್ ನಟರು ಮತ್ತು ಸಂಗೀತಕಾರರು ಭಾಗಿಯಾಗಿದ್ದಾರೆಂಬ ಸುದ್ದಿ ಕೇಳಿಬಂದ ಹಿನ್ನೆಲೆಯಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajih Lankesh) ಅವರು‌ 'ಇತ್ತೀಚೆಗೆ ತೀರಿಹೋದ ನಟರ ಪೋಸ್ಟ್ ಮಾರ್ಟಮ್ ಏಕೆ ಮಾಡ್ಲಿಲ್ಲ, ಪೊಲೀಸರು ಈ ಬಗ್ಗೆ ಏಕೆ ತಲೆ ಕೆಡಿಸಿಕೊಂಡಿಲ್ಲ?' ಎಂಬ ಖಡಕ್ ಪ್ರಶ್ನೆ ಎತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಇಂದ್ರಜಿತ್ ಲಂಕೇಶ್, 'ಇದಲ್ಲದೆ ಕೆಲವೇ ದಿನಗಳ ಹಿಂದೆ ಸೌತ್ ಎಂಡ್ ಸರ್ಕಲ್‌ ನಲ್ಲಿ ನಡೆದ ಅಪಘಾತದಲ್ಲಿ ಇದ್ದ ನಟರು ಹಾಗೂ ಉದ್ಯಮಿ ಮಕ್ಕಳು ಯಾರು ಎಂಬುದರ ಬಗ್ಗೆಯೂ ತನಿಖೆ ಆಗಬೇಕಿತ್ತು. ಅವರ ಹೆಸರುಗಳು ಬಹಿರಂಗವಾದರೂ ಪೊಲೀಸರು ಸರಿಯಾದ ತನಿಖೆಯನ್ನೇಕೆ ಮಾಡಲಿಲ್ಲ?' ಎಂದು ಪ್ರಶ್ನಿಸಿದ್ದಾರೆ.


ಬೆಂಗಳೂರಿನಲ್ಲಿ ಮೊದಲ ಬಾರಿಗೆ ಸಿಸಿಬಿಯಿಂದ ಬೃಹತ್ ಡ್ರಗ್ಸ್ ಜಾಲ ಪತ್ತೆ


ಬೆಂಗಳೂರಿನಲ್ಲಿ ಪತ್ತೆಯಾದ ಬೃಹತ್ ಡ್ರಗ್ಸ್ ಜಾಲದಲ್ಲಿ ರಾಜಕಾರಣಿಗಳ ಮಕ್ಕಳು, ನಟ -ನಟಿಯರು, ಉದ್ಯಮಿಗಳ ಮಕ್ಕಳು ಶಾಮೀಲಾಗಿದ್ದಾರೆ. ಎರಡೋ ಮೂರೋ ಸಿನಿಮಾಗಳಲ್ಲಿ ನಟಿಸುತ್ತಿದ್ದಂತೆ ರೇವ್ ಪಾರ್ಟಿ, ಡ್ರಗ್ ಪಾರ್ಟಿಯ ದಾಸರಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಕಿಡಿ ಕಾರಿದ್ದಾರೆ.


ಇತ್ತೀಚೆಗೆ ಸ್ಯಾಂಡಲ್ ವುಡ್ ಗೆ ಬರುತ್ತಿರುವ ನಟ-ನಟಿಯರು, ಮುಖ್ಯವಾಗಿ ಖ್ಯಾತ ನಟರ ಮಕ್ಕಳು, ಹಿರಿಯ ನಿರ್ದೇಶಕರು ಮತ್ತು ನಿರ್ಮಾಪಕರ ಮಕ್ಕಳು ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದಾರೆ.  ಪಾರ್ಟಿಗಳಲ್ಲಿ ಮಾತ್ರವಲ್ಲ, ಚಿತ್ರೀಕರಣದ ಸಮಯದಲ್ಲೂ ಕ್ಯಾರಾವಾನ್ ನಲ್ಲಿ ಡ್ರಗ್ಸ್ ತಗೆದುಕೊಳ್ಳುತ್ತಾರೆ ಎಂಬ‌ ಆತಂಕಕಾರಿ ಮಾಹಿತಿಯನ್ನೂ ಇಂದ್ರಜಿತ್ ಲಂಕೇಶ್ ಹೊರಹಾಕಿದ್ದಾರೆ.

ಇಂಥ ಕೆಲ ಕಿಡಿಗೇಡಿ ನಟನಟಿಯರಿಂದ ಇಡೀ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ. ಈ ರೀತಿಯ ಪಾರ್ಟಿ ಮಾಡುತ್ತಿರುವುದನ್ನು ನಾನು ಖುದ್ದಾಗಿ ನೋಡಿದ್ದೇನೆ ಮತ್ತು ಕೇಳಿದ್ದೇನೆ ಎಂದಿರುವ ಇಂದ್ರಜಿತ್ ಲಂಕೇಶ್, ಪೊಲೀಸ್ ಇಲಾಖೆ ಅಥವಾ ನಾರ್ಕೊಟಿಕ್ಸ್ ಬ್ಯೂರೋದವರು ಸಂಪರ್ಕ ಮಾಡಿದರೆ ನನ್ನ ಬಳಿ ಇರುವ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.