ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದ ಚಂದನವನದ ಖ್ಯಾತ ನಟ ಕಿಚ್ಚ ಸುದೀಪ್ ಜೆಡಿಎಸ್ ಸೇರ್ಪಡೆಯಾಗ್ತಾರೆ ಅಂತ ಸುದ್ದಿ ಹರಡಿತ್ತು. 


COMMERCIAL BREAK
SCROLL TO CONTINUE READING

ಸುದೀಪ್ ಜೆಡಿಎಸ್ ಸೇರದಿದ್ದರೂ ಈ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಮಾಡ್ತಾರೆ ಎಂಬ ಊಹಾಪೋಹಗಳಿಗೆ ಸುದೀಪ್ ರ ಈ ಭೇಟಿ ಪುಷ್ಟಿ ನೀಡಿತ್ತು. ಕುಮಾರಸ್ವಾಮಿ ಚಿತ್ರರಂಗದ ಸಂಪರ್ಕ ಹೊಂದಿದ್ದು, ಪ್ರಸ್ತುತ ಎಚ್ಡಿಕೆ ಪುತ್ರ ನಿಖಿಲ್ ಸಹ ಚಿತ್ರರಂಗದಲ್ಲಿದ್ದಾರೆ. ಹೀಗಾಗಿ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದು, ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎನ್ನಲಾಗಿದೆ.


ಏತನ್ಮಧ್ಯೆ, ನಟ ಸುದೀಪ್ ಇಂದು(ಗುರುವಾರ) ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವ ಸುದೀಪ್ ಕೆಲಕಾಲ ಮಾತುಕತೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸುದೀಪ್ ರಾಜಕಾರಣಕ್ಕೆ ಬರ್ತಾರಾ ಎಂಬ ಕುತೂಹಲ ಗರಿಗೆದರಿದೆ.


ಕಷ್ಟದಲ್ಲಿದ್ದವರಿಗೆ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದೆಂದು ತಮ್ಮ ಸಹಾಯ ಹಸ್ತ ನೀಡುವ ಕಿಚ್ಚ, ತಮ್ಮ ಸಮಾಜ ಸೇವೆಗೆ ರಾಜಕೀಯ ಆಯ್ಕೆ ಮಾಡ್ಕೋತಾರಾ? ಸುದೀಪ್ ಜೆಡಿಎಸ್ ಜೊತೆ ಸೇರಿ ತೆನೆಹೊತ್ತ ಮಹಿಳೆಯನ್ನು ಬೆಂಬಲಿಸುತ್ತಾರೋ ಅಥವಾ ಕಾಂಗ್ರೆಸ್ ಕೈ ಹಿಡಿಯುತ್ತಾರೋ ಎಂಬುದು ಮಾತ್ರ ರಹಸ್ಯ. ಆದರೆ ಈ ವಿಷಯದ ಬಗ್ಗೆ ಸುದೀಪ್ ಯಾವುದೇ ಖಚಿತ ಮಾಹಿತಿ  ನೀಡಿಲ್ಲ.