ರಾಜ್ಯದಲ್ಲಿ ತಮಿಳಿನ `ಕಾಳಾ` ಚಿತ್ರ ಬಿಡುಗಡೆ ಮಾಡದಿರುವುದೇ ಸೂಕ್ತ: ಮುಖ್ಯಮಂತ್ರಿ ಹೆಚ್ಡಿಕೆ
ತಮಿಳಿನ `ಕಾಳಾ` ಚಿತ್ರವನ್ನು ಬಿಡುಗಡೆ ಮಾಡದಿರುವುದೇ ಸೂಕ್ತ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ನಾನೊಬ್ಬ ಕನ್ನಡಿಗನಾಗಿ ಮಾತನಾಡುತ್ತಿದ್ದೇನೆ. ತಮಿಳಿನ 'ಕಾಳಾ' ಚಿತ್ರವನ್ನು ಬಿಡುಗಡೆ ಮಾಡದಿರುವುದೇ ಸೂಕ್ತ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಳಾ’ ಚಿತ್ರ ಬಿಡುಗಡೆಗೆ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದ ಹಲವು ಕನ್ನಡ ಪರ ಸಂಘಟನೆಗಳು ಸೇರಿದಂತೆ ಫಿಲಂ ಛೇಂಬರ್ ಕಡೆಯಿಂದ ಸಿನಿಮಾ ಬಿಡುಗಡೆಗೆ ವಿರೋಧ ಇದೆ. ಇದನ್ನರಿತು ಕಾಳಾ ಚಿತ್ರ ನಿರ್ಮಾಪಕರೇ ರಾಜ್ಯದಲ್ಲಿ ಸಿನಿಮಾ ಬಿಡುಗಡೆ ಮಾಡದೇ ಇದ್ದರೆ ಒಳ್ಳೆಯದು. ಒಂದು ವೇಳೆ ಮಾಡಿದರೆ ಅದರ ಪರಿಣಾಮವನ್ನು ಅವರೇ ಎದುರಿಸಬೇಕಾಗುತ್ತದೆ. ಇದುವರೆಗೂ ಹೈಕೋರ್ಟ್ ಆದೇಶದ ಪ್ರತಿ ನನಗೆ ದೊರೆತಿಲ್ಲ. ದೊರೆತ ನಂತರ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಆದರೆ, ಯಾರೇ ಆಗಲಿ ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಲೇಬೇಕು ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ನಿರ್ಮಾಣ ಸಂಸ್ಥೆ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ಅಳಿಯ ಧನುಷ್ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ಜಿ. ನರೇಂದರ್ ಅವರು, ಚಿತ್ರ ಬಿಡುಗಡೆಗೆ ಸಮ್ಮತಿ ಸೂಚಿಸಿ, ಸಿನೆಮಾ ಶಾಂತಿಯುತವಾಗಿ ಪ್ರದರ್ಶನಗೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆದೇಶ ನೀಡಿದ್ದರು.