ಬೆಂಗಳೂರು: COVID- 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಖ್ಯಾತ ನಟ ಕಿಚ್ಚ ಸುದೀಪ್ (Kichcha Sudeep) ಅವರು ಈ‌ ಬಾರಿಯ ತಮ್ಮ ಹುಟ್ಟಿದಹಬ್ಬವನ್ನು‌ ಇಂದು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

46 ವರ್ಷಕ್ಕೆ ಕಾಲಿಟ್ಟ ಕಿಚ್ಚ ಸುದೀಪ್, COVID- 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ  ಅಭಿಮಾನಿಗಳ ಹಿತದೃಷ್ಟಿಯಿಂದ ಸಾರ್ವಜನಿಕ ಸಂಭ್ರಮವನ್ನು ರದ್ದುಗೊಳಿಸಿದ್ದಾರೆ. ಸರಳವಾಗಿ ಕುಟುಂಬದವರ ಜೊತೆ ಮಾತ್ರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. 



ಅದಕ್ಕಾಗಿ ಅಭಿಮಾನಿಗಳಿಗೆ ಮನೆ ಬಳಿ ಬರದಂತೆ ಸುದೀಪ್ ಮನವಿ ಮಾಡಿಕೊಂಡಿದ್ದರು. ಆದರೂ ಬೆಂಗಳೂರಿನ ಕಿಚ್ಚ ಸುದೀಪ್ ಅವರ ಪುಟ್ಟೇನಹಳ್ಳಿ ನಿವಾಸಕ್ಕೆ ನಿನ್ನೆ ರಾತ್ರಿ ಅಭಿಮಾನಿಗಳ ದಂಡು ಆಗಮಿಸಿತ್ತು. ಹುಟ್ಟುಹಬ್ಬದ ಆಚರಣೆ ಇಲ್ಲ, ಜಾಗ ಖಾಲಿ ಮಾಡುವಂತೆ ಪೊಲೀಸ್ರು ಎಷ್ಟೇ ಹೇಳಿದರೂ ಕೇಳದ ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಆ ವೇಳೆ ಗುಂಪು ಸೇರಿದ್ದ ಅಭಿಮಾನಿಗಳನ್ನು ಚದುರಿಸಲು ಪೋಲಿಸರು ಲಾಠಿ ಬೀಸಬೇಕಾಯಿತು. ಮಧ್ಯ ರಾತ್ರಿಯವರೆಗೂ ಕಿಚ್ಚ ಸುದೀಪ್ ಗಾಗಿ ಕಾದಿದ್ದ ಅಭಿಮಾನಿಗಳು ಕಡೆಗೆ ವಾಪಸ್ ತೆರಳಿದರು.


ತಮ್ಮ ಹುಟ್ಟುಹಬ್ಬದ ಹಿನ್ನಲೆಯಲ್ಲಿ 'ಸಣ್ಣದೊಂದು ‌ಮನವಿ' ಎಂದು ಟ್ವೀಟ್ ‌ಮಾಡಿದ್ದ ಕಿಚ್ಚ ಸುದೀಪ್, COVID- 19 ಅಟ್ಟಹಾಸ ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ.


ಅಭಿಮಾನಿಗಳಿಗೆ ಪತ್ರಬರೆದು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ನಾವೆಲ್ಲರೂ COVID- 19 ವಿರುದ್ಧ ಹೋರಾಡ್ತಾ ಇದ್ದೇವೆ. ಇನ್ನೂ ಹೋರಾಡ ಬೇಕಾಗಿದೆ.‌ ಇಂತಹ ಸಮಯದಲ್ಲಿ ಜನರನ್ನ ಒಟ್ಟುಗೂಡಿಸೋದು ಎಂದರೆ ಹತ್ತು ಹೆಜ್ಜೆ ಹಿಂದೆ ಇಟ್ಟಂತೆ! ಆದುದರಿಂದ ಈ ಸಮಯದಲ್ಲಿ ಸಂಭ್ರಮಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರು.


'ನಿಮ್ಮ‌ ಫ್ಯಾಮಿಲಿ, ನನ್ನ ಫ್ಯಾಮಿಲಿಯಂತೆ' ಎಂದು ಅಭಿಮಾನಿಗಳನ್ನು‌ ಉದ್ದೇಶಿಸಿ ಭಾವುಕರಾಗಿ ಮಾತನಾಡಿರುವ ಕಿಚ್ಚ ಸುದೀಪ್, 'ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮನೆ ಬಳಿ ಯಾರೂ ಬರಬೇಡಿ. ಯಾವುದಾದರೂ ರೀತಿಯಲ್ಲಿ ‌ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಿ' ಎಂದು ಸಲಹೆ ಮಾಡಿದ್ದರು.


ಅದೇ ರೀತಿಯಲ್ಲಿ ಖಂಡಿತ ನಿಮ್ಮ ಭೇಟಿಗಾಗಿ ನನ್ನ ಮನಸ್ಸು ಯಾವಾಗಲೂ ತುಡಿಯುತ್ತಿರುತ್ತೆ. ನಿಮ್ಮ ಭೇಟಿಗಿಂತ ಹರ್ಷ ಬೇರೊಂದಿಲ್ಲ. ಆದರೆ ಈ ಬಾರಿ ಆಚರಣೆ ಬೇಡ ಅಂತ ಕಿಚ್ಚ ಸುದೀಪ್
ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದರು.