ಚಿರಂಜೀವಿ ಸರ್ಜಾ ನಮ್ಮನ್ನೆಲ್ಲ ಅಗಲಿ ಎರಡು ವರ್ಷಗಳಾಗುತ್ತಿದೆ. ಅವರ ಅಭಿನಯದ ಕೊನೆಯ ಚಿತ್ರ "ರಾಜ ಮಾರ್ತಾಂಡ" ಚಿತ್ರ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಧ್ರುವ ಸರ್ಜಾ ಧ್ವನಿ ನೀಡಿರುವ ಈ ಚಿತ್ರದ ಟ್ರೇಲರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಮೇಘನಾ ರಾಜ್ ಹಾಗೂ ಸುಂದರ್‌ ರಾಜ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.


COMMERCIAL BREAK
SCROLL TO CONTINUE READING

ಇದನ್ನು ಓದಿ: ಇವು ಸುವರ್ಣ ವಾಹಿನಿಯ ಸೂಪರ್‌ ಡೂಪರ್‌ ಧಾರಾವಾಹಿಗಳು


"ಚಿರು ಸರ್ ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಮಾಡುವುದು ಮಾತ್ರ ಬಾಕಿಯಿತ್ತು. ನಂತರ ನಡೆಯಬಾರದ ಘಟನೆ ನಡೆದದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಚಿರು ಅವರ ಪಾರ್ಥಿವ ಶರೀರ ನೋಡಲು ಹೋದಾಗ, ಧ್ರುವ ಸರ್ಜಾ ಕೇಳಿದ ಮೊದಲ ಮಾತು, ಅಣ್ಣ ಡಬ್ಬಿಂಗ್ ಮುಗಿಸಿದ್ದಾರಾ? ನಾನು ಇಲ್ಲ ಅಂದೆ. ನಾನು ಮಾಡಿಕೊಡುತ್ತೀನಿ ಎಂದರು. ಹಾಗೆ ಟ್ರೇಲರ್‌ಗೆ ಧ್ರುವ ಧ್ವನಿ ನೀಡಿದ್ದಾರೆ. ಸದ್ಯದಲ್ಲೇ ಡಬ್ಬಿಂಗ್ ಪೂರ್ಣಗೊಳಿಸಲಿದ್ದಾರೆ. ದರ್ಶನ್ ಸರ್ ಸಹ ವಾಯ್ಸ್ ಓವರ್ ಕೊಡುವುದಾಗಿ ಹೇಳಿದ್ದಾರೆ. ಮೇಘನಾ ರಾಜ್ ಹಾಗೂ ಸುಂದರ್‌ ರಾಜ್ ಅವರಂತೂ ನಮ್ಮ ಬೆಂಬಲಕ್ಕೆ ಸದಾ ಇದ್ದಾರೆ. ರಾಯನ್ ರಾಜ್ ಸರ್ಜಾ ಸಹ ನಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಧನ್ಯವಾದ. ಜೂನ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ದಿನಾಂಕ ನಿಗದಿಯಾಗಿದೆ. ಆದರೆ ಕೊರೊನಾ ನಾಲ್ಕನೇ ಅಲೆಯ ಪರಿಸ್ಥಿತಿ ನೋಡಿಕೊಂಡು ದಿನಾಂಕ ಘೋಷಣೆ ಮಾಡುತ್ತೇವೆ" ಎಂದರು ನಿರ್ದೇಶಕ ರಾಮ್ ನಾರಾಯಣ್.


"ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದೇವೆ. ಚಿರು ಅವರ 101 ಅಡಿ ಎತ್ತರದ ಕಟೌಟ್ ನಿಲ್ಲಿಸಲಿದ್ದೇವೆ ಹಾಗೂ ರಾಯನ್ ರಾಜ್ ಸರ್ಜಾ ಅವರ 51 ಅಡಿ  ಎತ್ತರದ ಕಟೌಟ್ ಸಹ ನಿಲ್ಲಿಸಲಿದ್ದೀವಿ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ" ಎಂದು ನಿರ್ಮಾಪಕ ಶಿವಕುಮಾರ್ ಹೇಳಿದರು.


ಈ ಸಂದರ್ಭದಲ್ಲಿ ಮಾತನಾಡಿದ ಮೇಘನಾ ರಾಜ್‌, "ಅದೇನೋ ಗೊತ್ತಿಲ್ಲ. ಅವರು ನಟಿಸುವ ಬೇರೆ ಚಿತ್ರಗಳ ಸಂಭಾಷಣೆಯನ್ನು ಅಲ್ಲೇ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗತ್ತಿದ್ದರು. ಆದರೆ ಈ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಅಷ್ಟು ಈ ಚಿತ್ರವನ್ನು ಹಚ್ಚಿಕೊಂಡಿದ್ದರು. ಅವರಿಲ್ಲದ ಈ ಸಮಯದಲ್ಲಿ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಸದಾ ನಿಮಗೆ ಇರುತ್ತದೆ" ಎಂದರು.


ನಟ ಸುಂದರ್‌ರಾಜ್, ನಾಯಕಿ ದೀಪ್ತಿ ಸಾಥಿ, ಮತ್ತೊಬ್ಬ ನಾಯಕಿ ಟಗರು ಖ್ಯಾತಿಯ ಋಶಿಕಾ ರಾಜ್ (ತ್ರಿವೇಣಿ, ಈಗ ಋಶಿಕಾ ರಾಜ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ‌), ಚಿರು ಮಿತ್ರರಾದ ಮನೀಷ್, ಸಚಿನ್ ಮುಂತಾದವರು "ರಾಜ ಮಾರ್ತಾಂಡ" ಚಿತ್ರದ ಬಗ್ಗೆ ಮಾತನಾಡಿದರು.


ಗೀತ ರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮ ನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಪ್ರಣವ್ ಗೌಡ ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ.


ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು.ಡಿ.ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.


ಇದನ್ನು ಓದಿ: Sai Pallavi: ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರಂತೆ ಸಾಯಿ ಪಲ್ಲವಿ!?


ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾಥಿ, ಮೇಘಶ್ರೀ, ತ್ರಿವೇಣಿ ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಕಾಣಿಸಿಕೊಂಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.