"ಲಹರಿ ಮ್ಯೂಸಿಕ್" ಪ್ರೊಡಕ್ಷನ್‌ ಹೌಸ್‌ ಅಡಿಯಲ್ಲಿ, ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಗೌರವ ಲಭಿಸಿದೆ. ರಿಕ್ಕಿ ಕೇಜ್ ಅವರಿಗೆ ಈ ಪ್ರಶಸ್ತಿ ಸಂದಿದೆ.  ಜೊತೆಗೆ ಲಹರಿ ಸಂಸ್ಥೆಗೆ 48 ವರ್ಷವೂ ಪೂರ್ಣಗೊಂಡಿದೆ. ಈ ಎರಡು ಸಂತಸವನ್ನು ಹಂಚಿಕೊಳ್ಳಲು ಲಹರಿ ವೇಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು.


COMMERCIAL BREAK
SCROLL TO CONTINUE READING

ಇದನ್ನು ಓದಿ: ಎಲ್ಲೆಲ್ಲೂ KGF 2 ಹವಾ: ಪೋಲೆಂಡ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಭವ್ಯ ಟಿಕೆಟ್‌ ಮಾರಾಟ ಆಯೋಜನೆ


ಈ ಸಂದರ್ಭದಲ್ಲಿ ಮಾತನಾಡಿದ ಲಹರಿ ವೇಲು, "ಕೇವಲ 500 ರೂಪಾಯಿ ಬಂಡವಾಳದಲ್ಲಿ ನನ್ನ ಅಣ್ಣ ಮನೋಹರ ನಾಯ್ಡು ಈ ಸಂಸ್ಥೆಯನ್ನು ಆರಂಭಿಸಿದರು. ಈಗ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬರಲು ನಿಮ್ಮೆಲ್ಲರ ಹಾರೈಕೆ ಕಾರಣ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ ಮೂಲಕ ಬಿಡುಗಡೆಯಾದ "ಡಿವೈನ್ ಟೈಡ್ಸ್ " ಆಲ್ಬಂಗೆ  ಸಂಗೀತ ನೀಡಿದ್ದಕ್ಕಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಈ ಗೌರವಕ್ಕೆ ಪಾತ್ರರಾದ ರಿಕ್ಕಿಕೇಜ್ ಅವರನ್ನು ಅಭಿನಂದಿಸುತ್ತೇನೆ. ಈ ಪ್ರಶಸ್ತಿ ಸಮಾರಂಭಕ್ಕೆ ನಾನು ವೀಸಾ ಸಿಗದ ಕಾರಣದಿಂದ ಹೋಗಿರಲಿಲ್ಲ. ನನ್ನ ಅಣ್ಣನ ಮಗ ಚಂದ್ರು , ರಿಕ್ಕಿಕೇಜ್ ಅವರ ಜೊತೆಗೆ ಹೋಗಿದ್ದರು. ಸದ್ಯದಲ್ಲೇ ರಿಕ್ಕಿಕೇಜ್ ಅವರ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರವೊಂದನ್ನು ನಮ್ಮ ಸಂಸ್ಥೆ ಮೂಲಕ ನಿರ್ಮಿಸುವ ತಯಾರಿ ನಡೆಯುತ್ತಿದೆ" ಎಂದು ತಿಳಿಸಿದರು.


ಆ ಬಳಿಕ ರಿಕ್ಕಿಕೇಜ್ ಮಾತನಾಡಿ, "ನನಗೆ ಎರಡನೇ ಬಾರಿ ಈ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಕೊರೊನಾ ಸಮಯದಲ್ಲಿ ಈ ಆಲ್ಬಂ  ನಿರ್ಮಾಣವಾಯಿತು. ಅನೇಕ ಕಲಾವಿದರನ್ನು  ಜೂಮ್ ಕಾಲ್ ಹಾಗೂ ಮೆಸೇಜ್‌ಗಳ ಮೂಲಕ ಸಂಪರ್ಕ ಮಾಡಿದ್ದೆ. ನೂರೈವತ್ತಕ್ಕೂ ಅಧಿಕ ಕಲಾವಿದರು ಹಾಗೂ ತಂತ್ರಜ್ಞರು ಈ ಹಾಡಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ ‌ಅರವತ್ತಕ್ಕೂ ಅಧಿಕರು ಭಾರತದವರು. ಮಿಕ್ಕವರು ಹೊರ ದೇಶದವರು. ಇಲ್ಲಿನ ವಾರಿಜಾಶ್ರೀ, ಅರುಣ್ ಕುಮಾರ್, ಸುಮಾ ರಾಣಿ, ಚೈತ್ರ ಮುಂತಾದ ಕಲಾವಿದರು ಈ ಆಲ್ಬಂ ನಲ್ಲಿದ್ದಾರೆ.  ನಾನು ಕನ್ನಡದಲ್ಲಿ "ಆಕ್ಸಿಡೆಂಟ್", " ವೆಂಕಟ ಇನ್ ಸಂಕಟ" ಹಾಗೂ "ಕ್ರೇಜಿ ಕುಟುಂಬ" ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಆ ಮೂರು ಸಿನಿಮಾಗಳ ನಾಯಕ ರಮೇಶ್ ಅರವಿಂದ್ ಅವರೇ. ರಮೇಶ್ ನನ್ನ ಆತ್ಮೀಯ ಸ್ನೇಹಿತರು. ನನಗೆ ಸಿನಿಮಾಗಿಂತ ವಿಭಿನ್ನ ಆಲ್ಬಂಗಳನ್ನು ಮಾಡುವುದರಲ್ಲೇ ಆಸಕ್ತಿ ಹೆಚ್ಚು" ಎಂದರು. 


ಇದನ್ನು ಓದಿ: ಭಾರತದ ರಿಕ್ಕಿ ಕೇಜ್‌ಗೆ ಗ್ರ್ಯಾಮಿ ಅವಾರ್ಡ್‌: "ನಮಸ್ತೆ" ಎನ್ನುತ್ತಾ ವೇದಿಕೆ ಏರಿದ ಸಂಗೀತ ಸರದಾರ


ಲಹರಿ ಸಂಸ್ಥೆಯ ಚಂದ್ರು ರಿಕ್ಕಿಕೇಜ್‌ ಬಗ್ಗೆ ಮಾತನಾಡಿದರು. "ಇಷ್ಟು ಎತ್ತರಕ್ಕೆ ಬೆಳೆದಿದ್ದರೂ ರಿಕ್ಕಿಕೇಜ್, ನಮ್ಮ ಸಂಸ್ಥೆಯ ಕಾರ್ಯಗಳಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆ. ಅವರು ನಮ್ಮೊಂದಿಗೆ ಯಾವುದೇ ಅಗ್ರಿಮೆಂಟ್ ಸಹ ಮಾಡಿಕೊಂಡಿಲ್ಲ. ಇದೇ ಅವರ ಪ್ರೀತಿಗೆ ಸಾಕ್ಷಿ" ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.