ರಾಜಮೌಳಿ ಶಿಷ್ಯನ ‘1770’ ಸಿನಿಮಾ: ಪ್ಯಾನ್ ಇಂಡಿಯಾ ಮೂವಿಯಾಗಲಿದೆ ‘ಆನಂದಮಠ’
ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕಾದಂಬರಿಯನ್ನು ಆಧರಿಸಿದ ಈ ಬಹುಭಾಷಾ ಚಿತ್ರವನ್ನು ಎಸ್ಎಸ್1 ಎಂಟರ್ಟೈನ್ಮೆಂಟ್ ಮತ್ತು ಪಿಕೆ ಎಂಟರ್ಟೈನ್ಮೆಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮ ನಿರ್ಮಿಸುತ್ತಿದ್ದಾರೆ
ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಕ ಎಂದೇ ಖ್ಯಾತರಾಗಿರುವ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಈಗ’ ಮತ್ತು ‘ಬಾಹುಬಲಿ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅಶ್ವಿನ್ ಗಂಗರಾಜು ಇದೀಗ ‘1770’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 75ನೇ ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕಾದಂಬರಿಯನ್ನು ಆಧರಿಸಿದ ಈ ಬಹುಭಾಷಾ ಚಿತ್ರವನ್ನು ಎಸ್ಎಸ್1 ಎಂಟರ್ಟೈನ್ಮೆಂಟ್ ಮತ್ತು ಪಿಕೆ ಎಂಟರ್ಟೈನ್ಮೆಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮ ನಿರ್ಮಿಸುತ್ತಿದ್ದಾರೆ. ಇನ್ನು, ಖ್ಯಾತ ಲೇಖಕ ಮತ್ತು ಚಿತ್ರ ನಿರ್ದೇಶಕ ರಾಮ್ ಕಮಲ್ ಮುಖರ್ಜಿ ಈ ಚಿತ್ರದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ವಂದೇ ಮಾತರಂಗೆ 150 ವರ್ಷವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ರಕ್ಕಮ್ಮನಿಗೆ ಸಂಕಷ್ಟ: ಜಾಕ್ವೆಲಿನ್ ವಿರುದ್ಧ ಚಾರ್ಜ್ ಶೀಟ್ ಫೈಲ್, ಬಂಧನದ ಸುಳಿಯಲ್ಲಿ ನಟಿ?
ಈ ಹಿಂದೆ ‘ಆಕಾಶವಾಣಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅಶ್ವಿನ್ ಗಂಗರಾಜು ಅವರಿಗೆ ಇದು ನಿರ್ದೇಶಕರಾಗಿ ಎರಡನೆಯ ಚಿತ್ರ. ಈ ಕುರಿತು ಮಾತನಾಡಿದ ಅವರು, ‘ಇಂಥದ್ದೊಂದು ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತರುವುದು ದೊಡ್ಡ ಸವಾಲು. ಆದರೆ, ರಾಜಮೌಳಿ ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರು ಕಥೆ, ಚಿತ್ರಕಥೆ ರಚಿಸುತ್ತಿರುವುದರಿಂದ, ಚಿತ್ರ ಅದ್ಭುತವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ. ಒಬ್ಬ ನಿರ್ದೇಶಕನಾಗಿ ಬೇರೆ ಕಾಲಘಟ್ಟದ, ಎಮೋಷನ್ ಗಳು ಹೆಚ್ಚಿರುವಂತಹ ಮತ್ತು ಆಕ್ಷನ್ ದೃಶ್ಯಗಳಿಗೆ ಹೆಚ್ಚು ಮಹತ್ವ ಇರುವಂತಹ ಚಿತ್ರಗಳನ್ನು ನಿರ್ದೇಶಿಸಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ. ಅದಕ್ಕೆ ಅನುಗುಣವಾಗಿ, ಈ ಕಥೆಯಲ್ಲಿ ಎಲ್ಲವೂ ಇದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು ಎನ್ನುವುದು ನಿರ್ಮಾಪಕರ ಕನಸಾಗಿದ್ದು, ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪರಿಪೂರ್ಣವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಆಶ್ವಿನ್.
ಈಗಾಗಲೇ ಅವರು ತಮ್ಮ ತಂಡದೊಂದಿಗೆ ಈ ಚಿತ್ರದ ಕುರಿತು ಸಾಕಷ್ಟು ರಿಸರ್ಚ್ ಮಾಡಿ, ಚಿತ್ರೀಕರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಬಂಕಿಮ್ ಚಂದ್ರ ಅವರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಕವನವು ಪ್ರಕಟವಾಗಿತ್ತು. ಈ ಕವನವು ಬ್ರಿಟಿಷ್ ಸಾಮ್ರಾಜ್ಯವನ್ನು ಅಕ್ಷರಶಃ ಅಲ್ಲಾಡಿಸಿತ್ತು. ವಂದೇ ಮಾತರಂ ಎನ್ನುವುದು ಮಹರ್ಷಿ ಬಂಕಿಮ ಚಂದ್ರರು ದೇಶವನ್ನು ಒಗ್ಗೂಡಿಸಲು ಉಚ್ಛರಿಸಿದ ಒಂದು ಮಂತ್ರ ಎನ್ನುತ್ತಾರೆ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್. ‘ಈ ದೇಶವು ಬ್ರಿಟಿಷರಿಂದ ಅನುಭವಿಸುತ್ತಿದ್ದ ದಾಸ್ಯ ಮತ್ತು ಅನ್ಯಾಯದ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಬಳಿಸದ ಒಂದು ಮಂತ್ರವಾಗಿತ್ತು. ಈ ಚಿತ್ರದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅದೆಷ್ಟೋ ಅಜ್ಞಾತ ವೀರ ಯೋಧರ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ.
ದೊಡ್ಡ ಬಜೆಟ್ನ ಮತ್ತು ಗಾತ್ರದ ಚಿತ್ರಗಳನ್ನು ಮಾಡುವುದಕ್ಕೆ ಇದು ಒಳ್ಳೆಯ ಸಮಯ ಎನ್ನುತ್ತಾರೆ ಎಸ್ಎಸ್1 ಎಂಟರ್ಟೈನ್ಮೆಂಟ್ನ ಶೈಲೇಂದ್ರ ಕುಮಾರ್. ‘ಮೂಲತಃ ಜಾನ್ಸಿಯವರಾದ ನಾವು ವಂದೇ ಮಾತರಂ ಹಾಡುತ್ತಾ, ಕೇಳುತ್ತಾ ಬೆಳೆದವರು. ಆದರೆ, ವಿಜಯೇಂದ್ರ ಪ್ರಸಾದ್ ಅವರು ಹೇಳಿದ ಕಥೆಯನ್ನು ಕೇಳಿ ನಿಜಕ್ಕೂ ದಂಗಾದೆವು. ಇಂಥದ್ದೊಂದು ಅಪರೂಪದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿರುವ ಸುಜಯ್ ಕುಟ್ಟಿ ಮತ್ತು ಕೃಷ್ಣಕುಮಾರ್ ಅವರಿಗೆ ನಾವು ಆಭಾರಿ. ಇದೊಂದು ಬರೀ ಚಿತ್ರವಲ್ಲ, ಬೆಳ್ಳಿಪರದೆಯ ಮೇಲೆ ಜನರನ್ನು ದೊಡ್ಡ ಮಟ್ಟದಲ್ಲಿ ಮನರಂಜಿಸಬೇಕು ಎಂಬ ದೊಡ್ಡ ಕನಸು’ ಎನ್ನುತ್ತಾರೆ ಶೈಲೇಂದ್ರ ಕುಮಾರ್.
ಸುಜಯ್ ಕುಟ್ಟಿ ಈ ಹಿಂದೆ ಜೀ ಸ್ಟುಡಿಯೋಸ್ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದವರು. ‘ಮಣಿಕರ್ಣಿಕಾ – ದಿ ಕ್ವೀನ್ ಆಫ್ ಜಾನ್ಸಿ’ ಮುಂತಾದ ಚಿತ್ರದ ನಿರ್ಮಾಣದಲ್ಲಿ ಗುರುತಿಸಿಕೊಂಡಿದ್ದವರು. ತಮ್ಮ ಹಾಗೂ ವಿಜಯೇಂದ್ರ ಪ್ರಸಾದ್ ಅವರ ಸ್ನೇಹ ಚಿತ್ರಗಳನ್ನು ಮೀರಿದ್ದು ಎನ್ನುವ ಅವರು, ‘ವಿಜಯೇಂದ್ರ ಪ್ರಸಾದ್ ಅವರು ನಮಗೆಲ್ಲರಿಗೂ ಸ್ಫೂರ್ತಿ. ನಾವು ‘1770’ ಚಿತ್ರವನ್ನು ನಿರ್ಮಿಸಿದರೆ, ಅದನ್ನು ವಿಜಯೇಂದ್ರ ಪ್ರಸಾದ್ ಅವರೇ ಬರೆಯಬೇಕು ಎಂದು ಮೊದಲೇ ಹೇಳಿದ್ದೆ. ಇಲ್ಲವಾದರೆ ಈ ಚಿತ್ರ ಮಾಡುವುದಿಲ್ಲ ಎಂದಿದ್ದೆ. ಅದಕ್ಕೆ ಸರಿಯಾಗಿ, ಅವರು ಒಪ್ಪಿ ನಮ್ಮ ಚಿತ್ರದ ಕಥೆ-ಚಿತ್ರಕಥೆಯನ್ನು ಪ್ರೀತಿಯಿಂದ ಬರೆದುಕೊಟ್ಟಿದ್ದಾರೆ’ಎನ್ನುತ್ತಾರೆ ಸುಜಯ್ ಕುಟ್ಟಿ.
ಇದನ್ನೂ ಓದಿ: ಟಿಪಿಎಲ್ ಜೆರ್ಸಿ-ಟ್ರೋಫಿ ಬಿಡುಗಡೆ: ಇನ್ಮುಂದೆ ನಡೆಯಲಿದೆ ಕಿರುತೆರೆ ಕಲಾವಿದರ ಕ್ರಿಕೆಟ್ ಲೀಗ್
‘1770’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ದಸರಾ ಹೊತ್ತಿಗೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಱರು ಆಯ್ಕೆಯಾಗಲಿದ್ದು, ದೀಪಾವಳಿ ವೇಳೆಗೆ ಅಧಿಕೃತ ಘೋಷಣೆಯಾಗಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.