ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಇನ್ನಿಲ್ಲ
ತೀವ್ರ ಎದೆನೋವು ಹಾಗು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.
ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ, ರೆಬಲ್ ಸ್ಟಾರ್ ಹಾಗೂ ಮಾಜಿ ಸಚಿವ ಅಂಬರೀಶ್ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ. ಇವರಿಗೆ 66 ವರ್ಷ ವಯಸ್ಸಾಗಿತ್ತು.
ತೀವ್ರ ಎದೆನೋವು ಹಾಗು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಶನಿವಾರ ಸಂಜೆ 4.30ರವರೆಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಭಾ.ಮ.ಹರೀಶ್ ಅವರ ಜತೆ ತಮ್ಮ ನಿವಾಸದಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ ಅಂಬರೀಶ್ ಅವರ ಆರೋಗ್ಯ ಸಂಜೆ 5 ಗಂಟೆ ವೇಳೆಗೆ ಏರುಪೇರಾಯಿತು. ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಅವರನ್ನು ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ದರು. ಡಾ. ಸತೀಶ್ ಮತ್ತು ತಂಡ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಆರಂಭಿಸಿದರಾದರೂ ರಾತ್ರಿ 10.50ರ ಸುಮಾರಿಗೆ ನಿಧನರಾದರು. ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
1952ನೇ ಮೇ 25ರಂದು ಮಂಡ್ಯದ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ ಜನಿಸಿದ್ದ ಮಳವಳ್ಳಿ ಹುಚೇಗೌಡ ಅಮರನಾಥ್ (ಅಂಬರೀಶ್) ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಇತ್ತೀಚೆಗೆ ಅವರ ಅಭಿನಯದ "ಅಂಬಿ ನಿಂಗ್ ವಯಸ್ಸಾಯ್ತೋ" ಚಿತ್ರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿತ್ತು.
ಕೇವಲ ನಟನಾಗಿ ಅಷ್ಟೇ ಅಲ್ಲದೆ, ರಾಜಕೀಯ ಜೀವನವನ್ನೂ ತೂಗಿಸಿಕೊಂಡು ಹೋಗುತ್ತಿದ್ದ ಸ್ನೇಹಜೀವಿ, ಜನಾನುರಾಗಿ ನಾಯಕ ಅಂಬರೀಶ್ ಇನ್ನಿಲ್ಲ ಎಂಬುದು ಕೊಟ್ಯಂತರ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.