ಮಾಧುರಿ ದೀಕ್ಷಿತ್, ಶ್ರೀದೇವಿ ಅವರಂತೆಯೇ ಸನ್ನಿ ಲಿಯೋನ್ ಕೂಡ: ಹಾರ್ದಿಕ್ ಪಟೇಲ್
ಅಶ್ಲೀಲ ಚಿತ್ರಗಳನ್ನು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇಂದಿಗೂ ಹಿಂದಿ ಚಿತ್ರ ತಾರೆ ಸನ್ನಿ ಲಿಯೋನ್`ಳನ್ನು ಅದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಹಾರ್ದಿಕ್ ಪಟೇಲ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದೋರ್: ಬಾಲಿವುಡ್ ತಾರೆ ಸನ್ನಿ ಲಿಯೋನ್ ಪರವಾಗಿ ಮತ್ತೊಮ್ಮೆ ಬ್ಯಾಟಿಂಗ್ ಮಾಡಿರುವ ಗುಜರಾತ್ನ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್, ಅಶ್ಲೀಲ ಚಿತ್ರಗಳನ್ನು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಇಂದಿಗೂ ಹಿಂದಿ ಚಿತ್ರ ತಾರೆ ಸನ್ನಿ ಲಿಯೋನ್'ಳನ್ನು ಅದೇ ದೃಷ್ಟಿಯಿಂದ ನೋಡುವುದು ಸರಿಯಲ್ಲ" ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮತದಾರರಿಗೆ ರಾಜಕೀಯದ ಬಗ್ಗೆ ಅರಿವು ಮೂಡಿಸಲು ಮಧ್ಯಪ್ರದೇಶದಲ್ಲಿ ರ್ಯಾಲಿ ಹಮ್ಮಿಕೊಂಡಿರುವ ಬಗ್ಗೆ ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ 'ಸನ್ನಿ ಲಿಯೋನ್ ಬಗ್ಗೆ ನಿಮ್ಮ ಅಭಿಪ್ರಾಯವೇನು?' ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್ ಪಟೇಲ್, "ನಾವ್ಯಾಕೆ ಸನ್ನಿ ಲಿಯೋನ್ ಅವರನ್ನು ಒಬ್ಬ ತೆರೆಯ ಮೇಲಿನ ನಟಿಯಂತೆ ನೋಡಬಾರದು? ಇತರ ಹಿಂದಿ ಚಿತ್ರ ನಟಿಯರಾದ ನರ್ಗೀಸ್, ಶ್ರೀದೇವಿ ಅಥವಾ ಮಾಧುರಿ ದೀಕ್ಷಿತ್ ಅವರಂತೆ ಸನ್ನಿ ಲಿಯೋನ್ ಅನ್ನೂ ಕೂಡ ಒಬ್ಬ ನಟಿಯಂತೆ ನೋಡುವುದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದರು.
ಮುಂದುವರೆದು "ಒಂದು ವೇಳೆ ನಮ್ಮ ಆಲೋಚನಾ ವಿಧಾನ ಬದಲಾಗದಿದ್ದರೆ ದೇಶ ಎಂದಿಗೂ ಬದಲಾಗುವುದಿಲ್ಲ ಎಂದು ಹೇಳಿದರು. ಈ ಹಿಂದೆಯೂ ಕೂಡ ಹಾರ್ದಿಕ್ ಪಟೇಲ್ ಸನ್ನಿ ಲಿಯೋನ್ ಅನ್ನು ಬೆಂಬಲಿಸಿದ್ದರು.
ಕೇಂದ್ರ ಸರ್ಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2019ರ ಬಳಿಕವೂ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ. ಕರ್ನಾಟಕದಲ್ಲಿ ಬಹುಮತ ಇಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡಿದ್ದು ನೋಡಿದರೆ, ದೇಶದಲ್ಲಿ ಸಂವಿಧಾನವನ್ನು ತಿರಸ್ಕರಿಸುವ ಸಿದ್ಧತೆಗಳು ನಡೆಯುತ್ತಿವೆ ಎಂದು ಹಾರ್ದಿಕ್ ಪಟೇಲ್ ಹೇಳಿದರು.