ನವದೆಹಲಿ: ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ 50 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ವಿಶೇಷ ಐಕಾನ್ ಆಫ್ ಗೋಲ್ಡನ್ ಜುಬಿಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ಪ್ರಕಟಿಸಿದ್ದಾರೆ.



COMMERCIAL BREAK
SCROLL TO CONTINUE READING

ಈಗ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿರುವ ಸಚಿವ ಪ್ರಕಾಶ್ ಜಾವಡೆಕರ್ ' ಕಳೆದ ಹಲವು ದಶಕಗಳಲ್ಲಿ, ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ, ಇಫ್ಫಿ ಐಕಾನ್ ಆಫ್ ಗೋಲ್ಡನ್ ಜುಬಿಲಿ 2019 ಪ್ರಶಸ್ತಿಯನ್ನು ರಜನಿಕಾಂತ್ ಅವರಿಗೆ ನೀಡಲಾಗುತ್ತಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ' ಎಂದು ಅವರು ಬರೆದುಕೊಂಡಿದ್ದಾರೆ.



ಇದಕ್ಕೆ ಧನ್ಯವಾದಗಳನ್ನು ಅರ್ಪಿಸಿ ಟ್ವೀಟ್ ಮಾಡಿರುವ ರಜನಿಕಾಂತ್ 'ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸುವರ್ಣ ಮಹೋತ್ಸವದಂದು ನನಗೆ ನೀಡಿದ ಈ ಪ್ರತಿಷ್ಠಿತ ಗೌರವಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ' ಎಂದು ಬರೆದಿದ್ದಾರೆ. ಚಲನಚಿತ್ರೋತ್ಸವವು ಗೋವಾದಲ್ಲಿ ನವೆಂಬರ್ 20 ರಿಂದ ನವೆಂಬರ್ 28 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ 250ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.