TANHAJI VS CHHAPAAK: ನೂರು ಕೋಟಿ ಕ್ಲಬ್ ಸೇರಿದ `ತಾನಾಜಿ`, ದೀಪಿಕಾ ಚಿತ್ರ ಗಳಿಸಿದ್ದೆಷ್ಟು?
`ಅಜಯ್ ದೇವಗನ್ ಅವರ 100 ನೇ ಚಿತ್ರ, 100 ಕೋಟಿ ರೂ.ತಲುಪುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ ಆರನೇ ದಿನಕ್ಕೆ ಈ ಚಿತ್ರ 100 ಕೋಟಿ ಕ್ಲಬ್ ಗೆ ಎಂಟ್ರಿ ನೀಡಿದೆ`
ನವದೆಹಲಿ:ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಅವರ ನೂರನೇ ಚಿತ್ರ 'ತಾನಾಜಿ-ದಿ ಅನ್ಸಂಗ್ ವಾರಿಯರ್' ಬಾಕ್ಸ್ ಆಫೀಸ್ ಮೇಲೆ ಭಾರೀ ಹವಾ ಸೃಷ್ಟಿಸಿದೆ. ಇದೀಗ ಬಂದ ಸುದ್ದಿಯ ಪ್ರಕಾರ ಈ ಚಿತ್ರ ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ 100 ಕೋಟಿ ಹಣ ಸಂಪಾದನೆ ಮಾಡಿದೆ.
ಈ ಚಿತ್ರದ ಗಳಿಕೆಯ ಅಂಶಗಳನ್ನು ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ತಮ್ಮ ತ್ವೆತ್ ನಲ್ಲಿ ಬರೆದುಕೊಂಡಿರುವ ತರಣ್ ಆದರ್ಶ್, "ಅಜಯ್ ದೇವಗನ್ ಅವರ 100 ನೇ ಚಿತ್ರ, 100 ಕೋಟಿ ರೂ.ತಲುಪುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆಯಾದ ಆರನೇ ದಿನಕ್ಕೆ ಈ ಚಿತ್ರ 100 ಕೋಟಿ ಕ್ಲಬ್ ಗೆ ಎಂಟ್ರಿ ನೀಡಿದೆ" ಎಂದಿದ್ದಾರೆ. ಇದರಿಂದ ವರ್ಷ 2020ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ 100 ಕೋಟಿ ರೂ. ಕ್ಲಬ್ ಸೇರಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ 'ತಾನಾಜಿ' ಪಾತ್ರವಾಗಿದೆ.
ಸುಮಾರು 150 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಓಂ ರಾವುತ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್ ತಾನಾಜಿ ಮಾಲುಸರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸೈಫ್ ಅಲಿ ಖಾನ್ ಋಣಾತ್ಮಕ ಭೂಮಿಕೆಯಲ್ಲಿ ಕಂಡು ಬಂದಿದ್ದಾರೆ.
ಇನ್ನೊಂದೆಡೆ 'ತಾನಾಜಿ-ದಿ ಅನ್ಸಂಗ್ ವಾರಿಯರ್' ಜೊತೆ ಬಿಡುಗಡೆಗೊಂಡಿದ್ದ ದೀಪಿಕಾ ಪಡುಕೋಣೆ ಅಭಿನಯದ 'ಛಪಾಕ್' ಚಿತ್ರ ಬಾಕ್ಸ್ ಆಫೀಸ್ ಮೇಲೆ ಐದನೇ ದಿನವೂ ಕೂಡ ನೆಲಕಚ್ಚಿದ್ದು, ಐದು ದಿನಗಳಲ್ಲಿ ಒಟ್ಟು 23.92 ಕೋಟಿ ರೂ. ಗಳಿಕೆ ಮಾಡಿದ್ದು, ಮೊದಲ ವಾರಾಂತ್ಯಕ್ಕೆ ಒಟ್ಟು 26 ಕೋಟಿ ರೂ.ಗಳ ವ್ಯಾಪಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.