ಡಾ.ರಾಜ್ ಸ್ಮಾರಕ ಪಕ್ಕದಲ್ಲೇ ಸೋಮವಾರ ಅಂಬರೀಶ್ ಅಂತ್ಯಕ್ರಿಯೆ
ಬೆಳಿಗ್ಗೆ 6 ಗಂಟೆಗೆ ಅಂಬರೀಶ್ ನಿವಾಸದಿಂದ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗುವುದು.
ಬೆಂಗಳೂರು: ಮಾಜಿ ಸಚಿವ, ಹಿರಿಯ ನಟ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಭಾನುವಾರ ಬೆಳಿಗ್ಗೆ 7.30 ರಿಂದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 6 ಗಂಟೆ ನಂತರ ಅಂಬರೀಶ್ ನಿವಾಸದಿಂದ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗುವುದು. ಇದಕ್ಕೂ ಮುನ್ನ ಒಕ್ಕಲಿಗ ಸಂಪ್ರದಾಯದಂತೆ ಅಂಬಿ ಪಾರ್ಥಿವ ಶರೀರಕ್ಕೆ ಪೂಜಾ ಕಾರ್ಯ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಂಬರೀಶ್ ಅವರ ಜೆ.ಪಿ.ನಗರ ನಿವಾಸದಿಂದ ಅರವಿಂದ ಮಾರ್ಗ- ರಾಜಲಕ್ಷ್ಮೀ-ಸೌತ್ ಎಂಡ್ ಸರ್ಕಲ್-ಮಿನರ್ವ ಸರ್ಕಲ್- ಶಿವಾಜಿನಗರ- ಟೌನ್ ಹಾಲ್- ಕಾರ್ಪೋರೇಶನ್, ಹಲಸೂರು ಗೇಟ್ ಮೂಲಕ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ಕೊಂಡೊಯ್ಯಲಾಗುವುದು. ಇಡೀ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಗೇಟ್ ನಂ.1 ರಲ್ಲಿ ಗಣ್ಯರಿಗೆ ಅವಕಾಶ ಕಲ್ಪಿಸಲಾಗಿದ್ದು, ಗೇಟ್ ನಂ.4 ರಲ್ಲಿ ಸಾರ್ವಜನಿಕರು ತೆರಳಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ದರ್ಶನದ ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.
ಅಭಿಮಾನಿಗಳ ಶೋಕ
ಅಂಬರೀಶ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜೆ.ಪಿ.ನಗರ ನಿವಾಸದ ಬಳಿ ಜಮಾಯಿಸಿದ ಸಾವಿರಾರು ಅಭಿಮಾನಿಗಳು ಅಂಬಿ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ‘ದೇವರಂಥ ಮನುಷ್ಯ ಅಂಬರೀಶ್ ಅಣ್ಣನಿಗೆ ಜೈ ಅಂತಾ ಘೋಷಣೆಗಳನ್ನ ಕೂಗುತ್ತಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೂರು ದಿನಗಳ ಶೋಕಾಚರಣೆ
ಇನ್ನೂ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ವಿಶೇಷ ಸಾರಿಗೆ ವ್ಯವಸ್ಥೆ
ಭಾನುವಾರ ಇಡೀ ದಿನ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗುತ್ತಿದೆ. ಅಂತಿಮ ದರ್ಶನಕ್ಕೆ ಆಗಮಿಸಲು ಮಂಡ್ಯ, ಮೈಸೂರು ಜಿಲ್ಲೆಯಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.