ನವದೆಹಲಿ: ಗರ್ಭಧಾರಣೆಯ ಆರಂಭಿಕ ವಾರಗಳಲ್ಲಿ ಧೂಮಪಾನ, ಮದ್ಯಪಾನ ಮಾಡುವುದರಿಂದ ಹುಟ್ಟುವ ಮಗುವಿನ ಮುಖ ವಿಕೃತವಾಗಲಿದೆ ಎಂಬ ಆಘಾತಕಾರಿ ಅಂಶವೊಂದನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(AIIMS)ಸಂಶೋಧನೆ ತಿಳಿಸಿದೆ.


COMMERCIAL BREAK
SCROLL TO CONTINUE READING

2010ರಲ್ಲಿ ಏಮ್ಸ್ ದಂತ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಈ ವಿಚಾರವಾಗಿ ಸಾಕಷ್ಟು ಸಂಶೋಧನೆಗಳನ್ನು ಆರಂಭಿಸಿದ್ದು, ದೆಹಲಿ, ಹೈದರಾಬಾದ್, ಲಕ್ನೋ ಮತ್ತು ಗೌಹಾಟಿಯಲ್ಲಿ ಸಂಶೋಧನೆ ಚಾಲ್ತಿಯಲ್ಲಿದೆ. ಜೊತೆಗೆ ದೆಹಲಿಯ ಏಮ್ಸ್ ಮತ್ತು ಗುರುಗ್ರಾಮದ ಮೆಡಿಸಿಟಿಯಲ್ಲಿ ಈ ಅಧ್ಯಯನ ಪ್ರಾಯೋಗಿಕ ಹಂತದಲ್ಲಿದೆ. 


ಇದರ ಪ್ರಕಾರ, ಗರ್ಭಿಣಿಯರು ನೇರ ಮತ್ತು ಪರೋಕ್ಷ ಧೂಮಪಾನ, ಮಧ್ಯಪಾನ ಮಾಡುವುದು, ಅಧಿಕ ಔಷಧಿಗಳ ಸೇವನೆ ಮತ್ತು ಅಪೌಷ್ಟಿಕತೆಯ ಕಾರಣದಿಂದಾಗಿ ಮಗುವಿನ ಉಸಿರಾಟದಲ್ಲಿ ಸಮಸ್ಯೆಯಾಗುತ್ತದೆ. ಇದು ಹುಟ್ಟುವ ಮಗುವಿನ ಮುಖವನ್ನು ವಿಕಾರಗೊಳಿಸುವ ಸಾಧ್ಯತೆಯಿದೆ. ಹೀಗಾಗಿಯೇ ನವಜಾತ ಶಿಶುಗಳಲ್ಲಿ ಸೀಳು ತುಟಿ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಹಲ್ಲುಗಳೂ ಸರಿಯಾಗಿ ಮೂಡದೆ, ಮುಖ ವಿಲಕ್ಷಣಗೊಳ್ಳುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.


ಹೀಗಾಗಿ ಸೀಳು ತುಟಿ ಸಮಸ್ಯೆಯಿಂದಾಗಿ ಮಗುವಿನ ಮುಖ ವಿಕಾರಗೊಳ್ಳುವುದಷ್ಟೇ ಅಲ್ಲದೆ, ಆಹಾರ ಅಗಿಯಲು, ಸ್ಪಷ್ಟವಾಗಿ ಮಾತನಾಡುವುದೂ ಸಹ ಸಮಸ್ಯೆಯಾಗುತ್ತದೆ. ಅಂದಾಜಿನ ಪ್ರಕಾರ, ಏಷ್ಯಾದಲ್ಲಿ ಜನಿಸುವ ಪ್ರತಿ 1000 ನವಜಾತ ಶಿಶುಗಳಲ್ಲಿ 35,000 ಶಿಶುಗಳು ಸೀಳುತುಟಿ ಸಮಸ್ಯೆಗೆ ಒಳಗಾಗುತ್ತಾರೆ ಎನ್ನಲಾಗಿದೆ.