ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಆಯೋಜಿಸಲಾದ ನೃತ್ಯ ಸ್ಪರ್ಧೆಯಲ್ಲಿ ಪ್ರದರ್ಶನ ನೀಡುತ್ತಿರುವಾಗಲೇ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ವೇದಿಕೆಯ ಮೇಲೆ ನೃತ್ಯ ಮಾಡುವ ವೇಳೆಯೇ 12ರ ಹರೆಯದ ಬಾಲಕಿ ಮೃತ ಪಟ್ಟಿದ್ದಾರೆ. ನೃತ್ಯ ಪ್ರಾರಂಭವಾದ ಕೆಲವೇ ಸೆಕೆಂಡುಗಳಲ್ಲಿ ಬಾಲಕಿ ವೇದಿಕೆಯ ಮೇಲೆ ಕುಸಿದು ಬೀಳುತ್ತಾಳೆ. 


COMMERCIAL BREAK
SCROLL TO CONTINUE READING

ಮೊದಲಿಗೆ, ಇದನ್ನು ಬಹುಶಃ ನೃತ್ಯದ ಹಂತ ಎಂದು ಜನರು ಭಾವಿಸುತ್ತಾರೆ. ಆದರೆ ಕೆಲವು ಸೆಕೆಂಡ್ ಬಳಿಕವೂ ಆಕೆ ಮೇಲೇಳದಿದ್ದನ್ನು ಕಂಡು ಓರ್ವ ವ್ಯಕ್ತಿ ವೇದಿಕೆಯ ಮೇಲೆ ಹೋಗಿ ಆಕೆಯನ್ನು ಎಬ್ಬಿಸಲು ಪ್ರಯತ್ನಿಸುತ್ತಾರೆ. ಆದರೆ ಆಕೆ ಏಳುವುದೇ ಇಲ್ಲ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಪೋಲಿಸ್ ಪ್ರಕಾರ, ನವೆಂಬರ್ 23 ರಿಂದ ಕಂಡಿವಲಿ ವೆಸ್ಟ್ನ ಲಾಲ್ಜಿ ಪಾಡಾದಲ್ಲಿ 'CM ಚಕ್ಶ್' ಎಂಬ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಕ್ರೀಡೆಗಳು ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಂಗಳವಾರ ಸಂಜೆ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, 12 ವರ್ಷ ವಯಸ್ಸಿನ ಅನೀಶಾ ಶರ್ಮಾ ಅವರು ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದರು. ಆನಿಷಾ ನೃತ್ಯ ಪ್ರಾರಂಭಿಸಿದ ಕೂಡಲೆ, ಅವಳು ವೇದಿಕೆಯ ಮೇಲೆ ಬಿದ್ದಳು ಎಂದು ಮಾಹಿತಿ ನೀಡಿದ್ದಾರೆ.


ಮೃತ ಅನೀಶಾ ಶರ್ಮಾ ಕಂಡಿವಲಿ ಪಶ್ಚಿಮ ನಿವಾಸಿಯಾಗಿದ್ದು, 7ನೇ ತರಗತಿಯಲ್ಲಿ ಓದುತ್ತಿರುವ ಆಕೆ ಅಧ್ಯಯನದ ಜೊತೆಗೆ ನೃತ್ಯದಲ್ಲಿ ಆಸಕ್ತಿ ಹೊಂದಿದ್ದರು. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಆಕೆಯ ಮರಣಕ್ಕೆ ಕಾರಣ ಏನೆಂಬುದು ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.