ಜಮ್ಮು-ಕಾಶ್ಮೀರ: ಕಂದಕಕ್ಕೆ ಬಸ್ ಉರುಳಿ 17 ಸಾವು, 16 ಮಂದಿಗೆ ಗಾಯ
ಮಿನಿ ಬಸ್ಸೊಂದು 300 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ 17 ಮಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ಶ್ರೀನಗರ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಮಿನಿ ಬಸ್ಸೊಂದು 300 ಅಡಿ ಆಳದ ಕಂದಕಕ್ಕೆ ಉರುಳಿದ ಪರಿಣಾಮ 17 ಮಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಧಾರುಣ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಥಕ್ರಾಯ್ ಬಳಿಯ ದಂಡಾರಣ್ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಕಿಶ್ತ್ವಾರ್ ಅಂಗ್ರೆಜ್ ಸಿಂಗ್ ರಾಣ, "ಬಸ್ ಅಪಘಾತದಲ್ಲಿ 17 ಮಂದಿ ಸಾವನ್ನಪ್ಪಿದ್ದು, 16 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ 11 ಪ್ರಯಾಣಿಕರನ್ನು ಹೆಲಿಕಾಪ್ಟರ್ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ. ಗಾಯಗೊಂಡಿರುವ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸುವ ಎಲ್ಲಾ ಪ್ರಯತ್ನವನ್ನೂ ಜಿಲ್ಲಾಡಳಿತ ಮಾಡುತ್ತಿದೆ" ಎಂದು ಹೇಳಿದ್ದಾರೆ.
ಈ ಮಿನಿ ಬಸ್ಸಿನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಅಂಗ್ರೆಜ್ ಸಿಂಗ್ ರಾಣಾ ತಿಳಿಸಿದ್ದಾರೆ.