ನವದೆಹಲಿ: 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ನರಮೇಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರನ್ನು ಸೋಮವಾರ ದೆಹಲಿಯ ನ್ಯಾಯಾಲಯ ದೋಷಿ ಎಂದು ಪರಿಗಣಿಸಿ, ಜೀವಾವಧಿ ಶಿಕ್ಷೆ ವಿಧಿಸಿದೆ. ಜತೆಗೆ ಸಜ್ಜನ್ ಕುಮಾರ ಅವರನ್ನು ಡಿಸೆಂಬರ್ 31ರೊಳಗೆ ಶರಣಾಗುವಂತೆ ಕೋರ್ಟ್ ಆದೇಶಿಸಿದೆ. 


COMMERCIAL BREAK
SCROLL TO CONTINUE READING

1984ರ ಅಕ್ಟೋಬರ್​ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೆಹಲಿ ಕಂಟೋನ್ ಮೆಂಟ್​ ಏರಿಯಾದಲ್ಲಿ ಗಲಭೆ ನಡೆದಿತ್ತು. ಈ ವೇಳೆ ಐವರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಸ್​​ ಮುರಳೀಧರ್​ ಹಾಗೂ ನ್ಯಾ. ವಿನೋದ್​ ಗೋಯಲ್​​ ಅವರ ಪೀಠ ಇಂದು ತೀರ್ಪು ಪ್ರಕಟಿಸಿದೆ. 



ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿತ್ತು. ಆದರೆ, ಇಂದು ದೆಹಲಿ ಹೈಕೋರ್ಟ್ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ಪರಿಗಣಿಸುವುದರೊಂದಿಗೆ ದೆಹಲಿ ಕಂಟೋನ್ಮೆಂಟ್ನ ರಾಜ್ ನಗರ ಪ್ರದೇಶದಲ್ಲಿ ಕುಟುಂಬದ ಐದು ಸದಸ್ಯರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಕೌನ್ಸಿಲರ್ ಬಲ್ವಾನ್ ಖೋಖರ್, ನಿವೃತ್ತ ನೌಕಾ ಅಧಿಕಾರಿ ಕ್ಯಾಪ್ಟನ್ ಭಾಗ್ಮಾಲ್, ಗಿರಿಧರಿ ಲಾಲ್ ಅವರನ್ನು ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.  ಕಿಶನ್ ಖೊಕ್ಕರ್ಮತ್ತು ಮಾಜಿ ಶಾಸಕ ಮಹೇಂದರ್ ಯಾದವ್ ಅವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 



ಅಲ್ಲದೆ, ಇಂದಿರಾಗಾಂಧಿ ಹತ್ಯೆಗೆ ಪ್ರತೀಕಾರವಾಗಿ ರಾಜಕೀಯ ಪ್ರೇರಿತ ಹಿಂಸಾಚಾರ ಭುಗಿಲೆದ್ದಿತ್ತು. ಇದು 1947ರ ಹಿಂಸಾಚಾರವನ್ನು ನೆನಪಿಸುವಂತಿತ್ತು ಎಂದು ನ್ಯಾಯಮೂರ್ತಿ ಎಸ್​​ ಮುರಳೀಧರ್​ ಹಾಗೂ ನ್ಯಾ. ವಿನೋದ್​ ಗೋಯಲ್​​ ಅವರ ಪೀಠ ಹಿಂಸಾಚಾರವನ್ನು ಖಂಡಿಸಿದೆ. ಅಂದು ನಡೆದ ಈ ಗಲಭೆ ಭಾರತೀಯ ಇತಿಹಾಸದಲ್ಲೇ ಕಪ್ಪು ಚುಕ್ಕೆಯಂತಿದೆ.