2005ರ ಅಯೋಧ್ಯೆ ಉಗ್ರರ ದಾಳಿ ಪ್ರಕರಣ: ನಾಲ್ವರು ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ, ಓರ್ವ ನಿರ್ದೋಷಿ
ಹದಿನಾಲ್ಕು ವರ್ಷಗಳ ಬಳಿಕ ಪೂರ್ಣಗೊಂಡ ವಿಚಾರಣೆಯಲ್ಲಿ 63 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. 2005ರಲ್ಲಿ ನಡೆದ ಅಯೋಧ್ಯೆ ಉಗ್ರರ ದಾಳಿಯ ಸಂಚಿನಲ್ಲಿ ಉಗ್ರರಿಗೆ ಬೇಕಾದ ನೆರವು ನೀಡಿದ್ದರು ಎಂಬ ಆರೋಪದ ಮೇಲೆ ಈ ಐವರನ್ನು ಬಂಧಿಸಲಾಗಿತ್ತು
ನವದೆಹಲಿ: 2005ರಲ್ಲಿ ಅಯೋಧ್ಯೆಯಲ್ಲಿ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗ್ರಾಜ್ನ ವಿಶೇಷ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದು, ಓರ್ವ ಆರೋಪಿಯನ್ನು ನಿರ್ದೋಷಿ ಎಂದು ಮಂಗಳವಾರ ತೀರ್ಪು ಪ್ರಕಟಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಚಂದ್ರ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಐವರನ್ನು ಬಂಧಿಸಿದ್ದರು. ಅವರನ್ನು ಇರ್ಫಾನ್, ಆಶಿಕ್ ಇಕ್ಬಾಲ್ ಅಲಿಯಾಸ್ ಫಾರೂಖ್, ಶಕೀಲ್ ಅಹ್ಮದ್, ಮಹಮ್ಮದ್ ನಸೀಮ್ ಮತ್ತು ಮಹಮ್ಮದ್ ಅಜೀಜ್ ಎಂದು ಗುರುತಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಬಂಧಿತರರಿರುವ ಅಲಹಬಾದ್ನ ನೈನಿ ಜೈಲಿನಲ್ಲಿಯೇ ತೀರ್ಪು ಪ್ರಕಟಿಸಲಾಗಿದ್ದು, ಇರ್ಫಾನ್, ಆಶಿಕ್ ಇಕ್ಬಾಲ್ ಅಲಿಯಾಸ್ ಫಾರೂಖ್, ಶಕೀಲ್ ಅಹ್ಮದ್, ಮಹಮ್ಮದ್ ನಸೀಮ್ ಅವರನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮತ್ತೋರ್ವ ಆರೋಪಿ ಮಹಮ್ಮದ್ ಅಜೀಜ್ ನನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಹದಿನಾಲ್ಕು ವರ್ಷಗಳ ಬಳಿಕ ಪೂರ್ಣಗೊಂಡ ವಿಚಾರಣೆಯಲ್ಲಿ 63 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. 2005ರಲ್ಲಿ ನಡೆದ ಅಯೋಧ್ಯೆ ಉಗ್ರರ ದಾಳಿಯ ಸಂಚಿನಲ್ಲಿ ಉಗ್ರರಿಗೆ ಬೇಕಾದ ನೆರವು ನೀಡಿದ್ದರು ಎಂಬ ಆರೋಪದ ಮೇಲೆ ಈ ಐವರನ್ನು ಬಂಧಿಸಲಾಗಿತ್ತು.