ಆಂಧ್ರ ಅಸೆಂಬ್ಲಿಯಲ್ಲಿ 23 ಕೋಟ್ಯಾಧಿಪತಿ ಮಂತ್ರಿಗಳು, 17 ಸಚಿವರ ಮೇಲೆ ಕ್ರಿಮಿನಲ್ ಪ್ರಕರಣ: ಎಡಿಆರ್
ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಸೇರಿದಂತೆ ಎಲ್ಲಾ 26 ಸಚಿವರ ಅಫಿಡವಿಟ್ ಗಳನ್ನು ವಿಶ್ಲೇಷಿಸಿದ ನಂತರ ಎಡಿಆರ್ ಜೂನ್ 25 ರಂದು ವರದಿಯನ್ನು ಬಿಡುಗಡೆ ಮಾಡಿತು.
ಅಪರಾಧ, ಹಣಕಾಸು, ಶಿಕ್ಷಣ, ಲಿಂಗ ಮತ್ತು ಇತರ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಚುನಾವಣಾ ವೀಕ್ಷಣೆ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ವಿಶ್ಲೇಷಣೆಯಲ್ಲಿ, ಆಂಧ್ರಪ್ರದೇಶದ ವಿಧಾನಸಭೆಯ 26 ಮಂತ್ರಿಗಳಲ್ಲಿ 23 ಮಂದಿ ಕೋಟ್ಯಾಧಿಪತಿಗಳು ಮತ್ತು 17 ಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಇರುವುದನ್ನು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಸೇರಿದಂತೆ ಎಲ್ಲಾ 26 ಸಚಿವರ ಅಫಿಡವಿಟ್ ಗಳನ್ನು ವಿಶ್ಲೇಷಿಸಿದ ನಂತರ ಎಡಿಆರ್ ಜೂನ್ 25 ರಂದು ಈ ಮಾಹಿತಿಯನ್ನು ಬಿಡುಗಡೆ ಮಾಡಿತು.
23 (88 ಶೇಕಡಾ) ಕೋಟ್ಯಾಧಿಪತಿ ಮಂತ್ರಿಗಳಲ್ಲಿ, 510.38 ಕೋಟಿ ರೂ.ಗಳ ಆಸ್ತಿ ಹೊಂದಿರುವ ಸಿ.ಎಂ.ರೆಡ್ಡಿ, 130 ಕೋಟಿ ರೂ.ಗಳ ಆಸ್ತಿ ಹೊಂದಿರುವ ಪೆಡ್ಡಿ ರೆಡ್ಡಿ ರಾಮಚಂದ್ರ ರೆಡ್ಡಿ ಮತ್ತು 61 ಕೋಟಿ ರೂ. ಆಸ್ತಿ ಹೊಂದಿರುವ ಮೇಕಾಪತಿ ಗೌತಮ್ ರೆಡ್ಡಿ ಸೇರಿದ್ದಾರೆ. 26 ಮಂತ್ರಿಗಳ ಸರಾಸರಿ ಆಸ್ತಿ 35.25 ಕೋಟಿ ರೂ. ಎಂದು ವಿಶ್ಲೇಷಣೆಯಲ್ಲಿ ಹೇಳಲಾಗಿದೆ.
ಒಟ್ಟು ಸಚಿವರಲ್ಲಿ ಮೂವರು ತಮ್ಮ ಒಟ್ಟು ವಾರ್ಷಿಕ ಆದಾಯವನ್ನು 1 ಕೋಟಿ ರೂ. ಎಂದು ಘೋಷಿಸಿದ್ದಾರೆ. ಅಲ್ಲದೆ, ಒಟ್ಟು 21 ಸಚಿವರು ತಮ್ಮ ಈಕ್ವಿಟಿಗಳನ್ನೂ ಘೋಷಿಸಿದ್ದಾರೆ.
ಒಟ್ಟು 65 ರಷ್ಟು ಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ. ಶೇಕಡಾ 35 ರಷ್ಟಿರುವ ಒಂಬತ್ತು ಮಂತ್ರಿಗಳು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿದ್ದಾರೆ.
ಕ್ಯಾಬಿನೆಟ್ ಒಟ್ಟು ಮೂರು ಮಹಿಳಾ ಸದಸ್ಯರನ್ನು ಹೊಂದಿದ್ದು, ಇದು ಶೇಕಡಾ 12 ರಷ್ಟಿದೆ.
ಒಟ್ಟು ಎಂಟು (31 ಶೇಕಡಾ) ಮಂತ್ರಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು ಎಂಟರಿಂದ ಹನ್ನೆರಡನೇ ತರಗತಿಯ ನಡುವೆ ಎಂದು ಘೋಷಿಸಿದರೆ, 18 (69 ಪ್ರತಿಶತ) ಮಂತ್ರಿಗಳು ಪದವೀಧರ ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. ಒಟ್ಟು 12 (46 ಶೇಕಡಾ) ಮಂತ್ರಿಗಳು ತಮ್ಮ ವಯಸ್ಸನ್ನು 31-50 ವರ್ಷಗಳು ಎಂದು ಘೋಷಿಸಿದರೆ, 14 (54 ಪ್ರತಿಶತ) ಮಂತ್ರಿಗಳು ತಮ್ಮ ವಯಸ್ಸನ್ನು 51- 70 ವರ್ಷಗಳು ಎಂದು ಘೋಷಿಸಿದ್ದಾರೆ.