2014ರಲ್ಲಿ ಇರಾಕಿನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರ ಹತ್ಯೆ: ಸುಷ್ಮಾ ಸ್ವರಾಜ್
ಇರಾಕಿನ ಮೊಸುಲ್`ನಲ್ಲಿ 2014 ರಿಂದ ಕಾಣೆಯಾಗಿದ್ದ 39 ಭಾರತೀಯರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಘೋಷಿಸಿದ್ದಾರೆ.
ನವದೆಹಲಿ : ಇರಾಕಿನ ಮೊಸುಲ್'ನಲ್ಲಿ 2014 ರಿಂದ ಕಾಣೆಯಾಗಿದ್ದ 39 ಭಾರತೀಯರು ಮೃತಪಟ್ಟಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಘೋಷಿಸಿದ್ದಾರೆ.
2014ರಲ್ಲಿ ಅಪಹರಣಕ್ಕೊಳಗಾದ 40 ಜನರಲ್ಲಿ ಒಬ್ಬರು ತಪ್ಪಿಸಿಕೊಂಡಿದ್ದು, ಮಣ್ಣುಮಾಡಲಾಗಿದ್ದ ಮೃತದೇಹಗಳ ಡಿಎನ್ಎ ಮಾದರಿಗಳು ಹೊಂದಾಣಿಕೆಯಾಗಿವೆ. ಇವರನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹತ್ಯೆಗೈದಿರುವುದಾಗಿ ಸುಷ್ಮಾ ಸ್ವರಾಜ್ ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ, ಕಾಣೆಯಾಗಿದ್ದ 39 ಭಾರತೀಯರನ್ನು ಮೃತಪಟ್ಟಿರುವುದಾಗಿ ಘೋಷಣೆ ಮಾಡಲು ನಿರಾಕರಿಸಿದ್ದ ಸುಷ್ಮಾ ಸ್ವರಾಜ್, ಯಾವುದೇ ಸಾಕ್ಷ್ಯ, ಪುರಾವೆಗಳಿಲ್ಲದೆ ಮೃತಪಟ್ಟಿರುವುದಾಗಿ ಘೋಷಿಸುವುದು ಮಹಾಪಾಪ ಎಂದು ಹೇಳಿದ್ದರು.
ಮೃತರು ಪಂಜಾಬ್ ರಾಜ್ಯದವರು. ಇವೆರಲ್ಲಾ ಕೆಲಸದ ನಿಮಿತ್ತ ಮೊಸೂಲ್‌ಗೆ ತೆರಳಿದ್ದರು. ಈ ವೇಳೆ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಹತ್ಯೆಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ.