ಲಕ್ನೋ: ಉತ್ತರಪ್ರದೇಶದ ಬಹುತೇಕ ಭಾಗಗಳಲ್ಲಿ ಬುಧವಾರ ಶೀತ ಗಾಳಿ ಹೆಚ್ಚಾದ ಪರಿಣಾಮ ಕೇವಲ 24 ಗಂಟೆಗಳಲ್ಲಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಮೃತಪಟ್ಟವರ ಸಂಖ್ಯೆ 143 ಕ್ಕೆ ಏರಿದೆ. 


COMMERCIAL BREAK
SCROLL TO CONTINUE READING

ಮುಂಜಾನೆ ದಟ್ಟ ಮಂಜು ರಾಜ್ಯದ ರಾಜಧಾನಿ ಮತ್ತು ನೆರೆಯ ಪ್ರದೇಶಗಳಲ್ಲಿ ಸಾಮಾನ್ಯ ಜೀವನವನ್ನು ಅಡ್ಡಿಪಡಿಸಿದ್ದು, ಕಳಪೆ ಗೋಚರತೆಯ ಕಾರಣದಿಂದಾಗಿ 12ಕ್ಕೂ ಹೆಚ್ಚು ರೈಲುಗಳು ರದ್ದುಗೊಂಡಿವೆ.


ರಾಜ್ಯದ ರಾಜಧಾನಿಯಲ್ಲಿನ ಶಾಲೆಗಳ ಚಳಿಗಾಲದ ರಜಾದಿನಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಒಂದು ದಿನ ವಿಸ್ತರಿಸಲಾಗಿದೆ.


ದಟ್ಟ ಮಂಜಿನಿಂದಾಗಿ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಅನೇಕ ಪ್ರದೇಶಗಳಲ್ಲಿನ ಗೋಚರತೆ 15-20 ಮೀಟರ್ಗಳಿಗೆ ಇಳಿಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 


ಬರಾಬಂಕಿಯಲ್ಲಿ ಶಾಲೆಗೆ ಹೋಗಿದ್ದ ಆರು ವರ್ಷದ ಬಾಲಕ ಸತ್ಯಂ ಚಳಿಯ ಕಾರಣದಿಂದಾಗಿ ಮರಣ ಹೊಂದಿರುವುದಾಗಿ ಆತನ ಪೋಷಕರು ತಿಳಿಸಿದ್ದಾರೆ. 


ಸರ್ಕಾರದ ಆದೇಶದ ಹೊರತಾಗಿಯೂ, ಖಾಸಗಿ ಶಾಲೆಗಳು ರಜೆ ನೀಡದ ಕಾರಣ ಈ ಬಗ್ಗೆ ವಿಚಾರಣೆ ಕೈಗೊಳ್ಳಲಾಗಿದೆ. 


ಕಾನ್ಪುರ್, ಫತೇಪುರ್, ಕನ್ನೌಜ್, ಪಿಲಿಭಿತ್, ಮೊರಾದಾಬಾದ್, ಸಂಭಲ್, ಅಮ್ರೋಹಾ, ರಾಂಪುರ್, ಹಮೀರ್ಪುರ್, ಅಜಮ್ ಘರ್, ಗಾಜಿಪುರ್ ಮತ್ತು ಬಲಿಯ ಪ್ರದೇಶಗಳಲ್ಲಿಯೂ ಸಾವಿನ ವರದಿಯಾಗಿವೆ.


ಶೀತ ಪ್ರದೇಶಗಳಲ್ಲಿ ಜನರಿಗೆ ಬೆಚ್ಚಗಿನ ಕಂಬಳಿಗಳು, ಬಟ್ಟೆ, ಕಟ್ಟಿಗೆ ಬೆಳಗಿಸುತ್ತಿರುವುದು ಮತ್ತು ರಾತ್ರಿ ಆಶ್ರಯಗಳನ್ನು ಸರ್ಕಾರದ ವತಿಯಿಂದ ಒದಗಿಸಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. 


ಪ್ರಾದೇಶಿಕ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿರುವಂತೆ ಈ ಶೀತ ತರಂಗಗಳು ಇನೂ ಕೆಲ ದಿನಗಳು ಮುಂದುವರಿಯಲಿದ್ದು, ಸೋಮವಾರದ ನಂತರ ಚಳಿ ಕಡಿಮೆಯಾಗಲಿದೆ ಎಂದಿದ್ದಾರೆ. 


ರಾಜ್ಯದ ರಾಜಧಾನಿಯಲ್ಲಿ ಸುಮಾರು 700 ಕ್ಕೂ ಪ್ರಾಣಿಗಳು, ಅದರಲ್ಲಿಯೂ ಹೆಚ್ಚಾಗಿ ಜಾನುವಾರುಗಳು ಮತ್ತು ನಾಯಿಗಳು ಮೃತಪಟ್ಟಿವೆ ಎಂದು ಲಕ್ನೋ ಮುನಿಸಿಪಲ್ ಕಾರ್ಪೋರೇಶನ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ರಾಜ್ಯದಲ್ಲಿ ಮೀರತ್ 2.9 ಡಿಗ್ರಿ ಸೆಲ್ಸಿಯಸ್ ಅತಿ ಚಳಿ ಹೊಂದಿದ್ದು, ಲಕ್ನೋ 4.8 ತಾಪಮಾನವನ್ನು ದಾಖಲಿಸಿದೆ. ಪಶ್ಚಿಮದ ಅಡಚಣೆಯ ಕಾರಣದಿಂದಾಗಿ ತೀವ್ರತರವಾದ ಶೀತ ಗಾಳಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.