ಶಿಲ್ಲಾಂಗ್ : ಮೇಘಾಲಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು 60 ಕ್ಷೇತ್ರಗಳಿಗೆ ಒಟ್ಟು 443 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್.ಆರ್.ಖಾರ್ಕೊಂಗೋರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

443 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ 59, ಎನ್ ಪಿಪಿ 53 ಮತ್ತು ಬಿಜೆಪಿಯ 47 ಅಭ್ಯರ್ಥಿಗಳು ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿದ್ದಾರೆ ಎಂದು ಖಾರ್ಕೊಂಗೋರ್ ಪಿಟಿಐಗೆ ತಿಳಿಸಿದ್ದಾರೆ.


ಮೇಘಾಲಯ ಮತ್ತು ನಾಗಾಲ್ಯಾಂಡ್ ಚುನಾವಣೆಗಳು ಫೆಬ್ರವರಿ 27 ರಂದು ನಡೆಯಲಿದ್ದು, ಫಲಿತಾಂಶವು ಮಾರ್ಚ್ 3 ರಂದು ನಾಗಾಲ್ಯಾಂಡ್ ಮತ್ತು ತ್ರಿಪುರಾ ಚುನಾವಣೆಗಳ ಫಲಿತಾಂಶಗಳೊಂದಿಗೆ ಪ್ರಕಟವಾಗಲಿದೆ. 


ಚುನಾವಣಾ ಇಲಾಖೆಯು ನಾಳೆ ನಾಮಪತ್ರಗಳ ಪರಿಶೀಲನೆ ನಡೆಸಲಿದ್ದು, ಸಲ್ಲಿಸಿರುವ ನಾಮಪತ್ರಗಳನ್ನು ಹೆಂತೆಗೆದುಕೊಳ್ಳಲು ಫೆಬ್ರುವರಿ 12 ಅಂತಿಮ ದಿನಾಂಕವಾಗಿದೆ ಎಂದು ನಿರೀಕ್ಷಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. 


ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಮುಂದಿನ ಸರ್ಕಾರ ರಚಿಸಲು ಗರಿಷ್ಠ ಸ್ಥಾನಗಳನ್ನು ಗಳಿಸುವ ವಿಶ್ವಾಸ ವ್ಯಕ್ತಪಡಿಸಿವೆ. ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಸರ್ಕಾರ ಹೊಂದಿರುವ ಬಿಜೆಪಿ, ಈ ತಿಂಗಳು ಮೂರೂ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗಳಿಸಲು ಪ್ರಯತ್ನ ನಡೆಸುತ್ತಿದೆ. 


ಮುಂಬರುವ ಮಣಿಪುರ ಮತ್ತು ನಾಗಾಲ್ಯಾಂಡ್ ಚುನಾವಣೆಯಲ್ಲಿ ಅತ್ಯುತ್ತಮ ನಿರೀಕ್ಷೆ ಹೊಂದಿರುವ  ರಾಷ್ಟ್ರೀಯ ಪೀಪಲ್ಸ್ ಪಾರ್ಟಿಯು ಭ್ರಷ್ಟ ಕಾಂಗ್ರೆಸ್ ಅನ್ನು ಬುಡಸಮೇತ ಕಿತ್ತೊಗೆಯಲು ಪ್ರಚಾರ ನಡೆಸಿದೆ. 


ಪ್ರಾದೇಶಿಕ ಪಕ್ಷಗಳಾದ ಯುನೈಟೆಡ್ ಡೆಮೋಕ್ರಾಟಿಕ್ ಪಾರ್ಟಿ ಮತ್ತು ಹಿಲ್ಸ್ ಸ್ಟೇಟ್ ಪೀಪಲ್ಸ್ ಡೆಮೋಕ್ರಾಟಿಕ್ ಪಾರ್ಟಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಜನರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ, ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿವೆ.