ಶ್ರೀನಗರ: ಜಮ್ಮು ಕಾಶ್ಮೀರದ ಉಧಮ್ಪುರ ಜಿಲ್ಲೆಯಲ್ಲಿ ಬಸ್‌ವೊಂದು ಆಳವಾದ ಕಂದರಕ್ಕೆ ಉರುಳಿಬಿದ್ದಿದ್ದು, ಈ ಅಪಘಾತದಲ್ಲಿ ಆರು ಪ್ರಯಾಣಿಕರು ಮೃತಪಟ್ಟಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಶನಿವಾರ ಬೆಳಿಗ್ಗೆ, ಬಸ್ ಉಧಮ್ಪುರ್ ಜಿಲ್ಲೆಯಿಂದ ಶ್ರೀನಗರಕ್ಕೆ ಹೋಗುವ ಸಂದರ್ಭದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. 


ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಚಾಲಕ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡಲು ಪ್ರಯತ್ನಿಸುವ ವೇಳೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಳೆ ಮತ್ತು ಭೂಕುಸಿತದ ಕಾರಣದಿಂದಾಗಿ ಈ ಮಾರ್ಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಅವರು ಹೇಳಿದರು.


ಸ್ಥಳಕ್ಕೆ ಆಗಮಿಸಿದ ಪಾರುಗಾಣಿಕಾ ತಂಡ:
ಈ ರಸ್ತೆ ಅಪಘಾತದ ಬಗೆಗಿನ ಮಾಹಿತಿ ದೊರೆಯುತ್ತಿದ್ದಂತೆ ಪಾರುಗಾಣಿಕಾ ತಂಡ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಐವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 35 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ತಕ್ಷಣ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಉಧಮ್ಪುರ ಎಸ್‌ಎಸ್‌ಎಸ್ಪಿ ರಾಜೀವ್ ಪಾಂಡೆ ತಿಳಿಸಿದ್ದಾರೆ.