ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಆಂಬ್ಯುಲೆನ್ಸ್-ಕಾರಿನ ನಡುವೆ ಭೀಕರ ಅಪಘಾತ, 7 ಸಾವು
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ನವದೆಹಲಿ: ಯಮುನಾ ಎಕ್ಸ್‌ಪ್ರೆಸ್ ವೇನಲ್ಲಿ ಮಂಗಳವಾರ(ಫೆಬ್ರವರಿ 19) ಮುಂಜಾನೆ ಆಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಏಳು ಮಂದಿ ಸಾವನ್ನಪ್ಪಿದ್ದಾರೆ. ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಈ ಘಟನೆಯು ಮೈಲ್ ಸ್ಟೋನ್ -138ರ ಸಮೀಪದಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 5 ಗಂಟೆಗೆ ಈ ಅಪಘಾತ ಸಂಭವಿಸಿದೆ. ಬಾಲ್ಡೆವ್ ಪ್ರದೇಶದ ಬುರ್ಜ್ ಸುಖದೇವ್ ಬಳಿ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಇಮೆಟೆನ್ ಕಾರಿಗೆ ಡಿಕ್ಕಿ ಹೊಡೆದಿದೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ, ನೋಯ್ಡಾದಿಂದ ಬಿಹಾರಕ್ಕೆ ಶವ ಹೊತ್ತು ಸಾಗುತ್ತಿದ್ದ ಆಂಬ್ಯುಲೆನ್ಸ್ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ಇನ್ನೊಂದೆಡೆಯಿಂದ ಬರುತ್ತಿದ್ದ ಎರಡು ಕಾರುಗಳು ಅಪಘಾತಕ್ಕೀಡಾಗಿವೆ.
ಭೀಕರ ಅಪಘಾತಕ್ಕೀಡಾದ ಆಂಬ್ಯುಲೆನ್ಸ್ ಮತ್ತು ಕಾರನ್ನು ಕ್ರೇನ್ ಮೂಲಕ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಮೃತ ದೇಹಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.