7ನೇ ವೇತನ ಆಯೋಗ: ಈ ರಾಜ್ಯದ 10 ಲಕ್ಷ ನೌಕರರಿಗೆ ಸಿಗಲಿದೆ ಲಾಭ!
7 ನೇ ವೇತನ ಆಯೋಗ: ಕೇಂದ್ರದ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮತಿ ನೀಡಿದ ನಂತರ, ರಾಜ್ಯಗಳು ತಮ್ಮ ಉದ್ಯೋಗಿಗಳಿಗೆ ಕೊಡುಗೆ ನೀಡಿವೆ.
7 ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 3 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ತುಟ್ಟಿಭತ್ಯೆ ಶೇ 9ರಿಂದ ಶೇ.12ಕ್ಕೆ ಏರಿಕೆಯಾಗಿದ್ದು, ಜನವರಿ 1, 2019ರಿಂದಲೇ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶಿಸಿತ್ತು. ಇದು ಕೇಂದ್ರ ಸರಕಾರದ 1.1 ದಶಲಕ್ಷ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಇದೀಗ ಇದರ ಬೆನ್ನಲ್ಲೇ 'ಬಿಹಾರ' ಕ್ಯಾಬಿನೆಟ್ ಕೂಡ ಜನವರಿ 1, 2019 ರಿಂದ ಜಾರಿಗೆ ಬರುವಂತೆ ಆದೇಶಿಸಿ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 3 ರಷ್ಟು ಹೆಚ್ಚಿಸಿದೆ.
ಪರಿಷ್ಕೃತ ವೇತನ ರಚನೆಯಲ್ಲಿ ರಾಜ್ಯ ಸರ್ಕಾರಿ ನೌಕರರು / ಪಿಂಚಣಿದಾರರು ಹಾಲಿ ಶೇ. 9 ತುಟ್ಟಿಭತ್ಯೆ ಇದ್ದು, ಬಿಹಾರ ಕ್ಯಾಬಿನೆಟ್ ಪ್ರಸ್ತುತ ಶೇ. 3ರಷ್ಟು ತುಟ್ಟಿಭತ್ಯೆ ಹೆಚ್ಚಿಸಿರುವುದರಿಂದ ಶೇ.12 ತುಟ್ಟಿಭತ್ಯೆ ಸಿಗಲಿದೆ. ಜನವರಿ 01, 2019 ರಿಂದ ಇದನ್ನು ಜಾರಿಗೆ ತರಲಾಗುವುದು.
ಬಿಹಾರ ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ 4 ಲಕ್ಷ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಮತ್ತು ಆರು ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ. ರಾಜ್ಯ ಖಜಾನೆಗೆ 1,100.94 ಕೋಟಿ ರೂ. ಹೆಚ್ಚುವರಿ ವಾರ್ಷಿಕ ಹೊರೆ ಆಗಲಿದೆ ಎಂದು ಹೇಳಲಾಗಿದೆ.
ಬಿಹಾರ, ತುಟ್ಟಿಭತ್ಯೆ ಹೆಚ್ಚಳವನ್ನು ಕಾರ್ಯಗತಗೊಳಿಸುತ್ತಿರುವ ಐದನೇ ರಾಜ್ಯವಾಗಿದೆ. ಇದಕ್ಕೆ ಮುಂಚೆ ರಾಜಸ್ಥಾನ 11 ಲಕ್ಷ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಒಡಿಶಾ, ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡ ರಾಜ್ಯಗಳು ನೌಕರರಿಗೆ ಡಿಎ ರೂಪದಲ್ಲಿ ವೇತನ ಹೆಚ್ಚಳ ಘೋಷಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ 6 ಲಕ್ಷ ಸರ್ಕಾರಿ ನೌಕರರನ್ನು ಹೊಂದಿದ್ದು, ಒಡಿಶಾ 5 ಲಕ್ಷ ಸರ್ಕಾರಿ ನೌಕರರನ್ನು ಹೊಂದಿದೆ.
ಕೇಂದ್ರ ಸರಕಾರದ ಕ್ರಮವನ್ನು ಅನುಸರಿಸಿ ಉತ್ತರಾಖಂಡ್ ಸರಕಾರವು ರಾಜ್ಯ ಉದ್ಯೋಗಿಗಳಿಗೆ ಶೇಕಡಾ 9 ರಿಂದ ಶೇ 12 ರವರೆಗೆ ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಇದು ಎರಡು ಲಕ್ಷ ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಪ್ರಯೋಜನವನ್ನು ನೀಡುತ್ತದೆ.