ನವದೆಹಲಿ: ನೌಕರರ ಭವಿಷ್ಯ ನಿಧಿ (EPFO) ಸಂಘಟನೆಯ ಚಂದಾದಾರರು ಶೇ. 8.5% ರಷ್ಟು  ಬಡ್ಡಿಯನ್ನು ಪಡೆಯುವುದನ್ನು ಮುಂದುವರೆಸಬಹುದಾಗಿದೆ. ಇದರಿಂದ ಪಿಎಫ್ ಚಂದಾದಾರರಿಗೆ ಭಾರಿ ನೆಮ್ಮದಿಯ ಸುದ್ದಿಯೇ ಸಿಕ್ಕಂತಾಗಿದೆ.  ಇಂದು ಇಪಿಎಫ್‌ಒ ಕೇಂದ್ರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈ ಬಡ್ಡಿ ದರವು ಚಂದಾದಾರರಿಗೆ ಒಟ್ಟು ಎರಡು ಹಂತಗಳಲ್ಲಿ ಸಿಗಲಿದೆ. ಮೊದಲ ಹಂತದಲ್ಲಿ ಇಪಿಎಫ್‌ಒ ತನ್ನ ಚಂದಾದಾರರಿಗೆ 8.15% ದರದಲ್ಲಿ ಬಡ್ಡಿಯನ್ನು ಪಾವತಿಸಲಿದ್ದು, ಉಳಿದ 0.35%ರಷ್ಟು ಬಡ್ಡಿಯನ್ನು ಡಿಸೆಂಬರ್‌ನಲ್ಲಿ ಪಾವತಿಸಲಾಗುತ್ತದೆ. ಚಂದಾದಾರರಿಗೆ ಬಡ್ಡಿ ನೀಡಲು ಇಪಿಎಫ್‌ಒ ತನ್ನ ಇಕ್ವಿಟಿ ಹೂಡಿಕೆಯ ಮಾರಾಟ ನಡೆಸಲಿದೆ.


COMMERCIAL BREAK
SCROLL TO CONTINUE READING

ETF ಮಾರಾಟ ಮಾಡುವ ಕಾರಣ ಏನು?
2019-20ನೇ ಸಾಲಿಗೆ ನೌಕರರ ಭವಿಷ್ಯ ನಿಧಿಗೆ (ಇಪಿಎಫ್) 8.5% ಬಡ್ಡಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಇದುವರೆಗೂ ಈ ಕುರಿತು ಅಧಿಸೂಚನೆಯನ್ನು ಜಾರಿಗೊಳಿಸಲಾಗಿರಲಿಲ್ಲ. ಇಪಿಎಫ್‌ಒ ಪಿಎಫ್‌ನಲ್ಲಿ ಶೇ .8.15 ರಷ್ಟು ಆದಾಯವನ್ನು ಹೊಂದಿರುವ ಕಾರಣ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ), ಉಳಿದ ಶೆ. 0.35 ರಷ್ಟು ಬಡ್ಡಿ ಪಾವತಿಸಲು ತನ್ನ ಇಟಿಎಫ್ ಮಾರಾಟ ಮಾಡಬೇಕಾಗಿದೆ. ಇದನ್ನು ಇಂದು ನಿರ್ಧರಿಸಲಾಯಿತು. ಆರಂಭದಲ್ಲಿ, ಸಿಬಿಟಿ ಮಾರ್ಚ್‌ನಲ್ಲಿಯೇ ಇಟಿಎಫ್ ಹೋಲ್ಡಿಂಗ್ಸ್ ಅನ್ನು ಮಾರಾಟ ಮಾಡಲು ಬಯಸಿತ್ತು. ಆದರೆ ನಂತರ ಮಾರುಕಟ್ಟೆಯಲ್ಲಿ ಭಾರಿ ಕುಸಿತದಿಂದಾಗಿ ಯೋಜನೆಯನ್ನು ರದ್ದುಗೊಳಿಸಲಾಯಿತು. ಈ ಪ್ರಸ್ತಾಪವು ಜೂನ್ ವರೆಗೆ ಮಾನ್ಯವಾಗಿತ್ತು, ಈಗ ಅದನ್ನು ನವೀಕರಿಸಲಾಗಿದೆ.


ETF ಹೂಡಿಕೆಯಿಂದ EPFOಗೆ  ಹಾನಿ ಉಂಟಾಗಿದೆ
EPFO ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಇದರಿಂದ ಚಂದಾದಾರರಿಗೆ ಬಡ್ಡಿದರ ಪಾವತಿಸಲು ಸಾಧ್ಯವಾಗುತ್ತಿಲ್ಲ. ಎಕ್ಸ್ಚೆಂಜ್ ಟ್ರೇಡೆಡ್ ಫಂಡ್ (ETF)ಗಳ ಮೂಲಕ ಕಳೆದ ಐದು ವರ್ಷಗಳಲ್ಲಿ ನಡೆಸಲಾಗುತ್ತಿದ್ದ ಹೂಡಿಕೆಯ ಮೂಲಕ EPFO ಗೆ ಬರುತ್ತಿದ್ದ ಆದಾಯ ನಕಾರಾತ್ಮಕವಾಗಿತ್ತು ಎನ್ನಲಾಗಿತ್ತು. EPFO ತನ್ನ ವಾರ್ಷಿಕ ಒಟ್ಟು ಆದಾಯದ ಶೇ.85 ರಷ್ಟು ಹಣವನ್ನು ಡೆಟ್ ಇನ್ವೆಸ್ಟ್ಮೆಂಟ್ ಗಳಲ್ಲಿ ಹೂಡಿಕೆ ಮಾಡುತ್ತದೆ. ಉಳಿದ ಶೇ. 15ರಷ್ಟು ಹೂಡಿಕೆಯನ್ನು ETF ಗಳ ಮೂಲಕ ಇಕ್ವಿಟಿ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಇಕ್ವಿಟಿ ಹೂಡಿಕೆಯನ್ನು ಸಾಮಾನ್ಯವಾಗಿ ರಿಸ್ಕಿ ಹೂಡಿಕೆ ಎಂದು ಹೇಳಲಾಗುತ್ತದೆ. ಆದರೆ, ಆದಾಯ ತುಂಬಾ ಉತ್ತಮವಾಗಿರುತ್ತದೆ. ಈ ಬಾರಿ ಕೊರೊನಾ ಸಂಕಷ್ಟದ ಕಾರಣ ಇಕ್ವಿಟಿ ಹೂಡಿಕೆಯ ಪ್ರದರ್ಶನ ತುಂಬಾ ನಕಾರಾತ್ಮಕವಾಗಿ ಹೊರಬಂದಿದೆ.