ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷ(ಎಎಪಿ) ಇಂದು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ದೆಹಲಿಗೆ ಸಂಪೂರ್ಣ ರಾಜ್ಯತ್ವ ಸಿಗುವವರೆಗೂ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಡುಗಡೆ ಮಾಡಿದರು, ಈ ವೇಳೆ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ, ರಾಜ್ಯ ಎಎಪಿ ಸಂಯೋಜಕ ಗೋಪಾಲ್ ರಾಯ್ ಮತ್ತು ದೆಹಲಿಯ ಎಲ್ಲಾ ಅಭ್ಯರ್ಥಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್, ದೆಹಲಿಗೆ ಸಂಪೂರ್ಣ ರಾಜ್ಯತ್ವ ಸಿಗುವವರೆಗೂ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಭರವಸೆ ನೀಡಿದ ಕೇಜ್ರಿವಾಲ್, ದೇಶವನ್ನು ವಿಭಜಿಸುವ ಶಕ್ತಿಗಳನ್ನು ಸೋಲಿಸುವುದೇ ಪರಮಗುರಿ ಎಂದರು.


"ಭಾರತವನ್ನು ಉಳಿಸುವ ಸಲುವಾಗಿ ಈ ಚುನಾವಣೆ. ನಮ್ಮ ದೇಶದ ಸಂವಿಧಾನವನ್ನು ಉಳಿಸಲು ಈ ಚುನಾವಣೆ. ಭಾರತದಲ್ಲಿ ಹಲವು ಧರ್ಮೀಯರು ವಾಸಿಸುತ್ತೇವೆ. ಆದರೂ, ಮೊದಲಿಗೆ ನಾವು ಭಾರತೀಯರು. ಇಂದು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಐಕ್ಯತೆ ಮೇಲೆ ದಾಳಿ ಮಾಡಲಾಗುತ್ತಿದೆ. ಭಾರತವನ್ನು ಜಾತಿ-ಧರ್ಮದ ಹೆಸರಿನಲ್ಲಿ ವಿಂಗಡಿಸಲಾಗುತ್ತಿದೆ. ಇದರಿಂದ ಭಾರತ ಉಳಿಯಲಾರದು" ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.  


ಇದೇ ಸಂದರ್ಭದಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿ ಬಗ್ಗೆ ಮಾತನಾಡಿದ ಅವರು, ನಾವು ಮೈತ್ರಿಗೆ ಸಿದ್ಧರಿದ್ದೇವೆ ಎನ್ನುತ್ತಾ ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ. ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಅದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ನೇರ ಹೊಣೆ ಎಂದು ಕಿಡಿಕಾರಿದರು.