ನವದೆಹಲಿ : ದೇಶದ ವಿವಿಧೆಡೆ ನಡೆದ ಐತಿಹಾಸಿಕ ವ್ಯಕ್ತಿಗಳ ಪ್ರತಿಮೆಗಳ ಧ್ವಂಸ ಪ್ರಕರಣಗಳನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿ, ರಾಜ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ ಬೆನ್ನಲ್ಲೇ, ಕೇರಳದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಗುರುವಾರ ಬೆಳಿಗ್ಗೆ ವಿರೂಪಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೇರಳದ ಕಣ್ಣೂರು ಜಿಲ್ಲೆಯ ತಾಲಿಪರಂಬದ ತಾಲ್ಲೂಕು ಕಚೇರಿ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಕನ್ನಡಕವನ್ನು ಮುರಿದು, ಹೂಮಾಲೆಯನ್ನು ನಾಶ ಮಾಡಿ, ಪ್ರತಿಮೆಗೆ ಕಲ್ಲೆಸೆದು ಹಾನಿ ಉಂಟುಮಾಡಿರುವುದಾಗಿ ವರದಿಗಳು ತಿಳಿಸಿವೆ. ಆದರೆ ಈ ಕೃತ್ಯಕ್ಕೆ ಕಾರಣವೇನು? ದುಷ್ಕರ್ಮಿಗಳು ಯಾರು ಎಂಬುದು ತಿಳಿದುಬಂದಿಲ್ಲ. 


ಏತನ್ಮಧ್ಯೆ, ತಮಿಳುನಾಡಿನ ಚೆನ್ನೈ ಸಮೀಪದ ತಿರುವೊಟಿಯೂರ್ನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಬಣ್ಣ ಹಾಕಿ ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. 


ಈ ಘಟನೆಗಳ ಬಗ್ಗೆ ಕಠಿಣ ಕಾನೂನು ಜಾರಿ ಮಾಡಲು ಕೇಂದ್ರ ಗೃಹ ಸಚಿವಾಲಯ ಸನ್ನದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕ್ರಮಕ್ಕೆ ಆದೇಶಿಸಿದ್ದಾರೆ. ಆದರೂ, ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿರುವುದು ದೇಶದ ಶಾಂತಿ ಕದಡಲು ನಡೆಸುತ್ತಿರುವ ಹುನ್ನಾರ ಎನ್ನಲಾಗುತ್ತಿದೆ.