ಅಗಸ್ಟಾವೆಸ್ಟ್‌ಲ್ಯಾಂಡ್ ಕೇಸ್: 6 ದಿನಗಳ ಕಾಲ ರತುಲ್ ಪುರಿ ಇಡಿ ಕಸ್ಟಡಿಗೆ
ಅಗಸ್ಟಾವೆಸ್ಟ್‌ಲ್ಯಾಂಡ್‌ನ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಉದ್ಯಮಿ ರತುಲ್ ಪುರಿಯನ್ನು ಆರು ದಿನಗಳ ಕಾಲ ಜಾರಿ ನಿರ್ದೇಶನಾಲಯಕ್ಕೆ (ಇಡಿ) ವಿಚಾರಣೆ ಮಾಡಲು ಕಳುಹಿಸಿದೆ.
ನವದೆಹಲಿ: ಅಗಸ್ಟಾವೆಸ್ಟ್‌ಲ್ಯಾಂಡ್‌ನ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಉದ್ಯಮಿ ರತುಲ್ ಪುರಿಯನ್ನು ಆರು ದಿನಗಳ ಕಾಲ ಜಾರಿ ನಿರ್ದೇಶನಾಲಯಕ್ಕೆ (ಇಡಿ) ವಿಚಾರಣೆ ಮಾಡಲು ಕಳುಹಿಸಿದೆ.
3,600 ಕೋಟಿ ರೂ.ಗಳ ಅಗಸ್ಟಾವೆಸ್ಟ್‌ಲ್ಯಾಂಡ್ ವಿ.ವಿ.ಐ.ಪಿ ಚಾಪರ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಡಿ ಪುರಿಯನ್ನು ಬಂಧಿಸಿದ ನಂತರ ಬುಧವಾರ ನ್ಯಾಯಾಲಯ ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಸೆಪ್ಟೆಂಬರ್ 17 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯನಾಗಿರುವ ಪುರಿ ಈ ಪ್ರಕರಣದಲ್ಲಿ ಶರಣಾಗಬೇಕೆಂದು ಕೋರಿ ಈ ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣವು ಇಟಲಿ ಮೂಲದ ಫಿನ್‌ಮೆಕಾನಿಕಾದ ಬ್ರಿಟಿಷ್ ಅಂಗ ಸಂಸ್ಥೆ ಅಗಸ್ಟಾವೆಸ್ಟ್‌ಲ್ಯಾಂಡ್‌ನಿಂದ 12 ವಿವಿಐಪಿ ಚಾಪರ್‌ಗಳನ್ನು ಖರೀದಿಸುವಲ್ಲಿನ ಅಕ್ರಮಗಳಿಗೆ ಸಂಬಂಧಿಸಿದೆ. ಒಪ್ಪಂದದ ಕಟ್ಟು ಪಾಡುಗಳ ಉಲ್ಲಂಘನೆ ಮತ್ತು ಒಪ್ಪಂದವನ್ನು ಭದ್ರಪಡಿಸಿಕೊಳ್ಳಲು ಕಿಕ್‌ಬ್ಯಾಕ್ ಪಾವತಿಸಿದ ಆರೋಪದ ಮೇಲೆ ಎನ್‌ಡಿಎ ಸರ್ಕಾರವು 2014 ರಲ್ಲಿ ಈ ಒಪ್ಪಂದವನ್ನು ರದ್ದುಗೊಳಿಸಿತು.