Air India: ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳ ಹಂತಕ್ಕೆ ಬೆಳೆಯುವ ಗುರಿ, ದಾಖಲೆಯ ವಿಮಾನ ಖರೀದಿ!
ದಿನೇ ದಿನೇ ಬೆಳೆಯುತ್ತಿರುವ ಭಾರತದ ಜನಸಂಖ್ಯೆ 2022ರ ಕೊನೆಯ ಭಾಗದಲ್ಲಿ ಚೀನಾದ ಜನಸಂಖ್ಯೆಯನ್ನೂ ಮೀರಿ, ಭಾರತ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸುವಂತೆ ಮಾಡಿತು. ಆದರೆ ಭಾರತದ ಜನಸಂಖ್ಯೆ ಇಷ್ಟು ಅಪಾರವಾಗಿದ್ದರೂ, ನಾಗರಿಕ ವಿಮಾನಯಾನದ ವಿಚಾರದಲ್ಲಿ ಮಾತ್ರ ಆ ಸಂಖ್ಯೆ ಕಾಣಿಸುವುದಿಲ್ಲ. ಇಂದು ಭಾರತದಲ್ಲಿ ಕೇವಲ ಅಂದಾಜು 700 ವಿಮಾನಗಳು ಮಾತ್ರವೇ ಇವೆ. ಅದರಲ್ಲಿ ಬೃಹತ್ ಗಾತ್ರದ ವಿಮಾನಗಳಂತೂ ಕೇವಲ 50ರ ಆಸುಪಾಸಿನಲ್ಲಿವೆ.
ಬೆಂಗಳೂರು: ದಿನೇ ದಿನೇ ಬೆಳೆಯುತ್ತಿರುವ ಭಾರತದ ಜನಸಂಖ್ಯೆ 2022ರ ಕೊನೆಯ ಭಾಗದಲ್ಲಿ ಚೀನಾದ ಜನಸಂಖ್ಯೆಯನ್ನೂ ಮೀರಿ, ಭಾರತ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎನಿಸುವಂತೆ ಮಾಡಿತು. ಆದರೆ ಭಾರತದ ಜನಸಂಖ್ಯೆ ಇಷ್ಟು ಅಪಾರವಾಗಿದ್ದರೂ, ನಾಗರಿಕ ವಿಮಾನಯಾನದ ವಿಚಾರದಲ್ಲಿ ಮಾತ್ರ ಆ ಸಂಖ್ಯೆ ಕಾಣಿಸುವುದಿಲ್ಲ. ಇಂದು ಭಾರತದಲ್ಲಿ ಕೇವಲ ಅಂದಾಜು 700 ವಿಮಾನಗಳು ಮಾತ್ರವೇ ಇವೆ. ಅದರಲ್ಲಿ ಬೃಹತ್ ಗಾತ್ರದ ವಿಮಾನಗಳಂತೂ ಕೇವಲ 50ರ ಆಸುಪಾಸಿನಲ್ಲಿವೆ.
ಭಾರತಕ್ಕೆ ಹೋಲಿಸಿದರೆ ಚೀನಾದ ವಿಮಾನಯಾನ ಸಂಸ್ಥೆಗಳು 480 2 ಸಾಲುಗಳಲ್ಲಿ ಆಸನಗಳಿರುವ ವಿಮಾನಗಳನ್ನು ಹೊಂದಿವೆ. ಇನ್ನು ದುಬೈ ಮೂಲದ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯ ಬಳಿಯೂ 260 ವಿಶಾಲ ವಿಮಾನಗಳ ಸಂಗ್ರಹವಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತನ್ನ ವಿಮಾನಗಳ ಸಂಖ್ಯೆಯನ್ನು ವೃದ್ಧಿಸಿ, ಆ ಮೂಲಕ ತನ್ನ ಜಾಗತಿಕ ಉಪಸ್ಥಿತಿಯನ್ನು ಸಾಬೀತುಪಡಿಸುವ ಪ್ರಯತ್ನ ನಡೆಸುತ್ತಿದೆ. ಟಾಟಾ ಸಮೂಹ 1 ವರ್ಷದ ಹಿಂದೆ ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾ ಸಂಸ್ಥೆಯನ್ನು 2.2 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿತು. ಬಳಿಕ ಇತ್ತೀಚೆಗೆ ಅಂದರೆ ಫೆಬ್ರವರಿ 14ರಂದು ಏರ್ ಇಂಡಿಯಾ ತಾನು 470 ನೂತನ ವಿಮಾನಗಳ ಖರೀದಿಗೆ ಆದೇಶ ಸಲ್ಲಿಸಿರುವುದಾಗಿ ಹೇಳಿಕೆ ನೀಡಿತು. ಏರ್ ಇಂಡಿಯಾದ ಈ ವಿಮಾನಗಳ ಖರೀದಿ ವಿಮಾನಯಾನ ಉದ್ಯಮದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ಖರೀದಿ ವ್ಯವಹಾರವಾಗಿದ್ದು, ಇದು 60 ಬಿಲಿಯನ್ ಡಾಲರ್‌ಗೂ ಮೀರಿದ ಖರೀದಿಯಾಗಿದೆ. ಈ ಒಪ್ಪಂದದ ಮಹತ್ವ ಎಷ್ಟು ಎನ್ನುವುದನ್ನು ಸಾಬೀತುಪಡಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರೋನ್ ಈ ಹೇಳಿಕೆಯಲ್ಲಿ ಭಾಗಿಯಾಗಿದ್ದರು.
ಈ ಒಪ್ಪಂದದಲ್ಲಿ ಏರ್ ಇಂಡಿಯಾ ಏರ್‌ಬಸ್ ಹಾಗೂ ಬೋಯಿಂಗ್ ಸಂಸ್ಥೆಗಳಿಂದ ವಿಮಾನಗಳನ್ನು ಖರೀದಿಸಲಿದ್ದು, 400ರಷ್ಟು ಜನಪ್ರಿಯ A320 ಹಾಗೂ 737 ಮಾದರಿಯ ವಿಮಾನಗಳನ್ನು ಖರೀದಿಸಿದರೆ, 70 ದೊಡ್ಡ ಗಾತ್ರದ ವಿಮಾನಗಳನ್ನು ಖರೀದಿಸಲಿದೆ. ಅದರೊಡನೆ ಏರ್ ಇಂಡಿಯಾ ಎರಡೂ ಕಂಪನಿಗಳಿಂದಲೂ ಇನ್ನಷ್ಟು ವಿಮಾನಗಳನ್ನು ಖರೀದಿಸುವ ಅವಕಾಶ ಉಳಿಸಿಕೊಂಡಿದೆ. ಈ ಹೊಸ ವಿಮಾನಗಳ ಖರೀದಿಯ ಪರಿಣಾಮವಾಗಿ ಏರ್ ಇಂಡಿಯಾ ಸ್ಥಳೀಯವಾಗಿ ಇಂಡಿಗೋದಂತಹ ವಿಮಾನಯಾನ ಸಂಸ್ಥೆಗಳು ಮತ್ತು ಜಾಗತಿಕವಾಗಿ ಎಮಿರೇಟ್ಸ್, ಎತಿಹಾದ್ ಏರ್‌ವೇಸ್ ನಂತಹ ಸಂಸ್ಥೆಗಳೊಡನೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಈ ಸಂಸ್ಥೆಗಳು ಕಳೆದ 2 ವರ್ಷಗಳಲ್ಲಿ ಅಪಾರವಾಗಿ ಕಾರ್ಯಾಚರಣೆ ನಡೆಸಿ, ಲಕ್ಷಾಂತರ ಪ್ರಯಾಣಿಕರಿಗೆ ಪ್ರಥಮ ಪ್ರಾಶಸ್ತ್ಯದ ಸಂಸ್ಥೆಗಳಾಗಿವೆ.
ಇದನ್ನೂ ಓದಿ: Viral Video : ಅಳಿಯನ ಬಾಯಿಗೆ ಸಿಗರೇಟ್ ಇಟ್ಟು ಸ್ವಾಗತಿಸಿದ ಅತ್ತೆ.! ಇದು ಇವರ ವಿವಾಹ ಸಂಪ್ರದಾಯವಂತೆ!!
ಸರ್ಕಾರದ ಆಡಳಿತದಡಿ ದಶಕಗಳ ಕಾಲ ಹಿನ್ನಡೆ ಅನುಭವಿಸಿದ ಬಳಿಕ ಏರ್ ಇಂಡಿಯಾ ವಿದೇಶೀ ಸಂಸ್ಥೆಗಳಿಂದ ತುಂಬಿರುವ ಅಂತಾರಾಷ್ಟ್ರೀಯ ವಿಮಾನಯಾನ ಮಾರುಕಟ್ಟೆಗೆ ಕಾಲಿಡುತ್ತಿದೆ. ಆದರೆ ಏರ್ ಇಂಡಿಯಾಗೆ ಇರುವ ಮೇಲುಗೈ ಎಂದರೆ ಅದು ಅತ್ಯಂತ ಪ್ರಮುಖ ಸ್ಥಳಗಳಿಗೂ ನೇರ ಪ್ರಯಾಣದ ವಾಯು ರಸ್ತೆಗಳನ್ನು ಹೊಂದಿದೆ. ಏರ್ ಇಂಡಿಯಾ ಸಂಸ್ಥೆ ಅಮೆರಿಕಾ ಮತ್ತು ಯುರೋಪ್‌ಗೂ ನೇರವಾಗಿ ತಡೆರಹಿತ ವಿಮಾನಗಳನ್ನು ಹೊಂದಿದ್ದು, ಮಧ್ಯಪೂರ್ವದಲ್ಲಿ ನಿಲುಗಡೆ ಇಲ್ಲದೆ ಚಲಿಸಬಲ್ಲವು. ಏರ್ ಇಂಡಿಯಾ ವಿಮಾನಗಳಿಗೆ ಪ್ರಮುಖ ವಿಮಾನ ನಿಲ್ದಾಣಗಳಾದ ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ಹಾಗೂ ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣಗಳಲ್ಲೂ ನಿಲುಗಡೆ ಕಾಯ್ದಿರಿಸಲಾಗಿದೆ.
ಮುಂಬೈಯಿಂದ ನ್ಯೂಯಾರ್ಕ್‌ಗೆ ನೇರ ವಿಮಾನ ಪ್ರಯಾಣ 16 ಗಂಟೆ ತೆಗೆದುಕೊಳ್ಳುತ್ತದೆ. ಆದರೆ ದುಬೈ ಮೂಲಕ ನ್ಯೂಯಾರ್ಕ್‌ಗೆ ಪ್ರಯಾಣಿಸಲು 20 ಗಂಟೆ ಬೇಕಾಗುತ್ತದೆ. ಏರ್ ಇಂಡಿಯಾದ ಸ್ಯಾನ್ ಫ್ರಾನ್ಸಿಸ್ಕೊ ವಿಮಾನ ಸೇವೆಯಂತೂ ಈಗ ಲಭ್ಯವಿರುವ ಇತರ ಸೇವೆಗಳ ಅರ್ಧ ಸಮಯ ತೆಗೆದುಕೊಳ್ಳುತ್ತದೆ. ಭಾರತದಿಂದ ತೆರಳುವ ಮತ್ತು ಭಾರತಕ್ಕೆ ಬರುವ ತಡೆರಹಿತ ಪ್ರಯಾಣದ ಸಾಧ್ಯತೆ ಏರ್ ಇಂಡಿಯಾಗೆ ಗಲ್ಫ್ ವಿಮಾನಯಾನ ಸಂಸ್ಥೆಗಳ ಎದುರು ಮೇಲುಗೈ ಒದಗಿಸಲಿದೆ.
ಭಾರತ ಸರ್ಕಾರ ಈಗಾಗಲೇ ಏರ್ ಇಂಡಿಯಾ ಮಾಲಿಕತ್ವವನ್ನು ಟಾಟಾ ಸಮೂಹಕ್ಕೆ ನೀಡಿದ್ದರೂ, ಪ್ರಮುಖ ದೇಶೀಯ ವಿಮಾನಯಾನ ಸಂಸ್ಥೆಗೆ ಸಹಕಾರ ನೀಡುವುದು ಸರ್ಕಾರಕ್ಕೂ ಪ್ರಮುಖ ಆದ್ಯತೆಯಾಗಿದೆ. ಬೆಳೆಯುತ್ತಿರುವ ವಿಮಾನಯಾನ ಕ್ಷೇತ್ರ ಹೊಂದಿರುವ ಭಾರತ ಜಾಗತಿಕ ಸಂಪರ್ಕ ತಾಣವೂ ಹೌದು, ಪ್ರವಾಸ ಮತ್ತು ವ್ಯವಹಾರಗಳ ನೆಚ್ಚಿನ ತಾಣವೂ ಹೌದು. ಇದರಿಂದಾಗಿ ಸರ್ಕಾರವೂ ವಿಮಾನಯಾನ ಸಂಸ್ಥೆಗಳು ನೇರ ಪ್ರಯಾಣವನ್ನು ಹೆಚ್ಚಿಸುವಂತೆ ಉತ್ತೇಜಿಸುತ್ತದೆ ಮತ್ತು ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತದ ಆರ್ಥಿಕ ರಾಜಧಾನಿಯಾದ ಮುಂಬೈಯಲ್ಲಿ ಮುಂದಿನ ವರ್ಷ 2ನೇ ವಿಮಾನ ನಿಲ್ದಾಣ ಆರಂಭವಾಗಲಿದ್ದು, ವರ್ಷಕ್ಕೆ 70 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ದೆಹಲಿಯಲ್ಲೂ ಇನ್ನೊಂದು ವಿಮಾನ ನಿಲ್ದಾಣ ತೆರೆಯಲಿದ್ದು, 70 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ವಿಮಾನಗಳ ಒಪ್ಪಂದದ ಬಳಿಕ ಏರ್‌ಬಸ್ ಸಂಸ್ಥೆಯ ಸಿಇಓ ಗುಯಿಲೌಮ್ ಫೌರಿ ಭಾರತ ಅಂತಾರಾಷ್ಟ್ರೀಯ ವಿಮಾನಯಾನ ತಾಣವಾಗಲು ಈಗ ಸೂಕ್ತ ಸಮಯ ಬಂದಿದೆ ಎಂದಿದ್ದರು.
ಇದನ್ನೂ ಓದಿ: EC on Shiv Sena: ಚುನಾವಣಾ ಆಯೋಗದಿಂದ ಉದ್ಧವ್ ಠಾಕ್ರೆಗೆ ಹೊಡೆತ: ಶಿಂಧೆ ಪಾಲಾದ ಶಿವಸೇನೆಯ ‘ಬಿಲ್ಲು-ಬಾಣ’
ಟಾಟಾ ಮಾತ್ರವಲ್ಲದೆ ಏರ್ ಇಂಡಿಯಾ ಬಳಿ ಇನ್ನೊಂದು ಶಕ್ತಿಶಾಲಿ ಸಹಯೋಗಿಯಾಗಿ ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್ ಸಹ ಇದೆ. ಈ ಸಂಸ್ಥೆ 250 ಮಿಲಿಯನ್ ಡಾಲರ್ ಹೂಡಿಕೆ ಮಾಡಿ, ಶೇ.25ರಷ್ಟು ಪಾಲನ್ನು ಏರ್ ಇಂಡಿಯಾ ಮತ್ತು ಇತರ 3 ವಿಮಾನಯಾನ ಸಂಸ್ಥೆಗಳಿರುವ ಬೃಹತ್ ಒಕ್ಕೂಟದಲ್ಲಿ ಪಡೆಯಲಿದೆ. ಇವುಗಳಲ್ಲಿ ಟಾಟಾ ಮತ್ತು ಸಿಂಗಾಪುರ 2015ರಲ್ಲಿ ಆರಂಭಿಸಿದ ವಿಸ್ತಾರ ಏರ್‌ಲೈನ್ಸ್ ಸಹ ಸೇರಿದೆ. ಈ ಸಂಸ್ಥೆಗಳ ಅನುಭವ ಮತ್ತು ಸಾಮರ್ಥ್ಯ ಏರ್ ಇಂಡಿಯಾದ ಅಂತಾರಾಷ್ಟ್ರೀಯ ವಲಯದಲ್ಲಿನ ಅಭಿವೃದ್ಧಿಗೆ ನೆರವಾಗಲಿದೆ.
ಏರ್ ಇಂಡಿಯಾದ ಮುಂದಿರುವ ಅತಿದೊಡ್ಡ ಸವಾಲೆಂದರೆ ಹಾಳಾಗಿರುವ ತನ್ನ ಖ್ಯಾತಿಯನ್ನು ಮರಳಿ ಸಂಪಾದಿಸುವುದು. ಭಾರತದ ವಾಯುಯಾನ ಉದ್ಯಮದ ಪಿತಾಮಹ ಮತ್ತು ಟಾಟಾ ಸಮೂಹದ ಅಧ್ಯಕ್ಷರಾದ ಜೆಆರ್‌ಡಿ ಟಾಟಾ ಅವರು ಏರ್ ಇಂಡಿಯಾವನ್ನು 1932ರಲ್ಲಿ ಸ್ಥಾಪಿಸಿದರು. ಈ ಸಂಸ್ಥೆ ಆಗಿನ ಕಾಲದಲ್ಲಿ ತನ್ನ ಅತ್ಯುತ್ಕೃಷ್ಟ ಸೇವೆಗಾಗಿ ಹೆಸರುವಾಸಿಯಾಗಿತ್ತು. 1960ರ ದಶಕದಲ್ಲಿ ಜೆಟ್‌ಗಳನ್ನು ಹೊಂದಿದ್ದ ಏಷ್ಯಾದ ಮೊದಲ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆ ಏರ್ ಇಂಡಿಯಾಗಿತ್ತು.
1953ರಲ್ಲಿ ಏರ್ ಇಂಡಿಯಾ ರಾಷ್ಟ್ರೀಕರಣಗೊಂಡ ಬಳಿಕ ಸರ್ಕಾರದ ಆಡಳಿತದಡಿ ಕೆಟ್ಟ ನಿರ್ವಹಣೆ ಮತ್ತು ಸಮಯ ನಿರ್ವಹಣೆಯ ಕೊರತೆ ಏರ್ ಇಂಡಿಯಾದ ಹೆಸರನ್ನು ಹಾಳು ಮಾಡಿತ್ತು. ಏರ್ ಇಂಡಿಯಾದ ದೇಶೀಯ ವ್ಯವಹಾರವನ್ನೂ ಇತರ ವಿಮಾನಯಾನ ಸಂಸ್ಥೆಗಳು ಆಕ್ರಮಿಸಿಕೊಂಡಿದ್ದವು. ಅದರೆ ಅಂತಾರಾಷ್ಟ್ರೀಯ ವ್ಯವಹಾರವನ್ನು ಗಲ್ಫ್ ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳು ಕಸಿದುಕೊಂಡವು. ಸಾಲದ ಸಂಕೋಲೆಯಲ್ಲಿ ಸಿಲುಕಿಕೊಂಡಿದ್ದ ಏರ್ ಇಂಡಿಯಾ ಕಳೆದ 16 ವರ್ಷಗಳಲ್ಲಿ ಲಾಭದ ಮುಖ ನೋಡಿರಲೇ ಇಲ್ಲ. ಅದು ಕೇವಲ ಜನರ ತೆರಿಗೆ ಹಣದಿಂದಷ್ಟೇ ಅಸ್ತಿತ್ವ ಉಳಿಸಿಕೊಂಡಿತ್ತು.
ಇದನ್ನೂ ಓದಿ: ಪ್ರಧಾನ ಮಂತ್ರಿ ಮಂಧನ್ ಯೋಜನೆಯಿಂದ ಯಾರಿಗೆ ಲಾಭ ..?
ಇಷ್ಟು ಕಾಲ ಕೆಟ್ಟ ಸೇವೆಯಿಂದಲೇ ಕುಖ್ಯಾತಿ ಪಡೆದಿದ್ದ ಏರ್ ಇಂಡಿಯಾ ಮರಳಿ ಜನರ ಪ್ರೀತಿ ಗಳಿಸಲು ಸಾಕಷ್ಟು ಸಮಯಾವಕಾಶ ಹಿಡಿಯಲಿದೆ. ಅದಕ್ಕಾಗಿ ಸಿಗುವ ಅವಕಾಶಗಳೂ ಪರಿಮಿತವಾಗಿವೆ. ಪುನರುಜ್ಜೀವನ ಪಡೆದಿರುವ ಏರ್ ಇಂಡಿಯಾ ಸಂಸ್ಥೆ ತನ್ನ ಸಣ್ಣ ಹಾರಾಟದ ಮಾರ್ಗಗಳಲ್ಲೇ ಹೆಚ್ಚಿನ ಸ್ಪರ್ಧೆ ಎದುರಿಸಲಿದೆ. ಕಡಿಮೆ ದರದಲ್ಲಿ ಸೇವೆ ಒದಗಿಸುವ ಇಂಡಿಗೋ ಸಂಸ್ಥೆಯ 300 A320 ವಿಮಾನಗಳು ಸ್ಥಳೀಯ ಮಾರುಕಟ್ಟೆಯ ಅರ್ಧಕ್ಕಿಂತಲೂ ಹೆಚ್ಚು ತಮ್ಮ ವಶಕ್ಕೆ ತೆಗೆದುಕೊಂಡಿವೆ. ನೂತನ ಸಂಸ್ಥೆಯಾದ ಆಕಾಶ ಏರ್ ಸಹ ಈ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಬೃಹತ್ ಖರೀದಿ ಒಪ್ಪಂದಕ್ಕೂ ಮೊದಲೇ ಟಾಟಾ ಸಂಸ್ಥೆಯ ಅಧ್ಯಕ್ಷರಾದ ನಟರಾಜನ್ ಚಂದ್ರಶೇಖರನ್ ಅವರು ಏರ್ ಇಂಡಿಯಾ ಸಂಪೂರ್ಣ ಬದಲಾವಣೆ ಹೊಂದಲಿದ್ದು, ಸಿಬ್ಬಂದಿಗಳಿಗೆ ಹೊಸ ಸಮವಸ್ತ್ರ, ಹಳೆಯ ವಿಮಾನಗಳಲ್ಲೂ ನೂತನ ಮನೋರಂಜನಾ ವ್ಯವಸ್ಥೆ, ಅತ್ಯಾಧುನಿಕ ಆಸನ ವ್ಯವಸ್ಥೆ ಇತ್ಯಾದಿಗಳನ್ನು ಜಾರಿಗೆ ತರಲಾಗುತ್ತದೆ ಎಂದಿದ್ದಾರೆ. ಒಟ್ಟಾರೆ ಏರ್ ಇಂಡಿಯಾ 400 ಮಿಲಿಯನ್‌ಗೂ ಹೆಚ್ಚು ಮೊತ್ತವನ್ನು ವಿಶಾಲ ಶ್ರೇಣಿಯ ವಿಮಾನಗಳ ಆಂತರಿಕ ನವೀಕರಣಕ್ಕೆ ಮೀಸಲಿಡಲಿದೆ.
ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಏರ್ ಇಂಡಿಯಾ ಸಂಸ್ಥೆಗೆ ವಿಮಾನಯಾನ ಕ್ಷೇತ್ರದಲ್ಲಿ ತಾನೊಂದು ಅಭಿವೃದ್ಧಿಪರ ಸಂಸ್ಥೆ ಎಂದು ಸಾಬೀತುಪಡಿಸಲು ಸಾಕಷ್ಟು ಸಮಯ ಹಿಡಿಯಲಿದೆ. ಅದಕ್ಕಾಗಿ ಏರ್ ಇಂಡಿಯಾ ಕೇವಲ ತನ್ನ ಹಳೆಯ ಪರಂಪರೆಯ ಮೇಲೆ ಅವಲಂಬಿತವಾಗಿರಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏರ್ ಇಂಡಿಯಾದ ಸ್ಥಿತಿಯನ್ನು ಯಾವುದಾದರೂ ಸಂಸ್ಥೆ ಉತ್ತಮಪಡಿಸಲು ಸಾಧ್ಯವೆಂದರೆ ಅದು ಟಾಟಾ ಮಾತ್ರ ಎನ್ನುತ್ತಾರೆ ನಟರಾಜನ್. 400 ವಿಮಾನಗಳ ಖರೀದಿಯ ದಾಖಲೆಯ ಅತಿದೊಡ್ಡ ಒಪ್ಪಂದದ ಬಳಿಕ, ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನಗಳ ಸಂಪರ್ಕ ತಾಣವಾಗಿ ಭಾರತವನ್ನು ರೂಪುಗೊಳಿಸಿ ಗಲ್ಫ್ ಸಂಸ್ಥೆಗಳಿಗೆ ತಕ್ಕ ಉತ್ತರ ಕೊಡುವ ಉದ್ದೇಶವನ್ನೂ ಹೊಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.