ಲಕ್ನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್'ನಿಂದ ದೂರವಿರುವ ಬಗ್ಗೆ ಈಗಾಗಲೇ ಚಿಂತನೆ ನಡೆಸಿರುವ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಇಂದು ಮೈತ್ರಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. 


COMMERCIAL BREAK
SCROLL TO CONTINUE READING

ಇಂದು ಮಧ್ಯಾಹ್ನ 12 ಗಂಟೆಗೆ ಲಕ್ನೋನ ತಾಜ್​ ಹೋಟೆಲ್​ನಲ್ಲಿ ಇಬ್ಬರೂ ನಾಯಕರು ಜಂಟಿ ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದು, ಈ ಸಂದರ್ಭದಲ್ಲಿ ತಮ್ಮ ಮಹಾ ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.


ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿದ್ದು, ಎಸ್‌ಪಿ ಮತ್ತು ಬಿಎಸ್‌ಪಿ ಎರಡೂ ಪಕ್ಷಗಳು ಉತ್ತರ ಪ್ರದೇಶದಲ್ಲಿ ಹೆಚ್ಚು ಬಲವಾಗಿವೆ. ಹೀಗಾಗಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದರಿಂದ ಸ್ಥಾನಗಳು ಹಂಚಿ ಹೋಗುವ ಸಾಧ್ಯತೆ ಇರುವುದರಿಂದ ಕೇವಲ ಎಸ್ಪಿ-ಬಿಎಸ್ಪಿ ಮೈತ್ರಿಯಾಗಿ ಚುನಾವಣೆ ಎದುರಿಸುವ ರಣತಂತ್ರ ರೂಪಿಸಲು ಮಾಯಾವತಿ ಮುಂದಾಗಿದ್ದಾರೆ. ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡು, ಗೆಲುವು ಸಾಧಿಸಿದ್ದವು, ಹೀಗಾಗಿ 2019ರ ಚುನಾವಣೆಯಲ್ಲೂ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಸಿದ್ಧತೆ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ.


ಈ ಮೊದಲು ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಭಾವ ತಗ್ಗಿಸಲು ಎಸ್ಪಿ ಹಾಗೂ ಬಿಎಸ್ಪಿ ಮೈತ್ರಿ ಮಾಡಿಕೊಂಡು ಉಪ ಚುನಾವಣೆಯಲ್ಲಿ ಯಶಸ್ಸುಗೊಳಿಸಿದ ಬಳಿಕ ಈ ಮೈತ್ರಿ ನಿರೀಕ್ಷಿತವಾಗಿತ್ತು. ಆದರೆ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಮಹಾ ಘಟಬಂದನ್ ನಿಂದ ದೂರ ಉಳಿದಿದ್ದ ಬಹುಜನ ಸಮಾಜ ಪಕ್ಷದ ಜೊತೆ ಸಮಾಜವಾದಿ ಪಕ್ಷ ಕೂಡ ಕೈಜೋಡಿಸಿದೆ. ಈ ಮೂಲಕ ಬದ್ಧವೈರಿಗಳಾಗಿದ್ದ ಎರಡೂ ಪಕ್ಷದ ನಾಯಕರು 25 ವರ್ಷಗಳ ಬಳಿಕ ಈ ಮೈತ್ರಿಗೆ ಮುಂದಾಗಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ಇಂದು ಮಧ್ಯಾಹ್ನ ನಡೆಯಲಿರುವ ಜಂಟಿ ಪತ್ರಿಕಾಗೊಷ್ಟಿಯತ್ತ ನೆಟ್ಟಿದೆ.