ಗುಜರಾತ್: ಡಿಸಿಎಂ ನಿತಿನ್ ಪಟೇಲ್ ಭೇಟಿಯಾದ ಅಲ್ಪೇಶ್ ಠಾಕೂರ್, ಬಿಜೆಪಿ ಸೇರುವ ಸಾಧ್ಯತೆ!
ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಶಾಸಕ ಅಲ್ಪೇಶ್ ಠಾಕೂರ್ ಇಂದು ಗುಜರಾತ್ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಪಟೇಲ್ ಅವರನ್ನು ಭೇಟಿಯಾಗಿದ್ದಾರೆ. ಇದರಿಂದ ಅಲ್ಪೇಶ್ ಠಾಕೂರ್ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದಂತಾಗಿದೆ.
ಗಾಂಧಿನಗರ: ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ, ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಶಾಸಕ ಅಲ್ಪೇಶ್ ಠಾಕೂರ್ ಇಂದು ಗುಜರಾತ್ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಪಟೇಲ್ ಅವರನ್ನು ಭೇಟಿಯಾಗಿದ್ದಾರೆ. ಇದರಿಂದ ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸವಾಲೆಸೆದು ಸದ್ದು ಮಾಡಿದ್ದ ಫೈರ್ ಬ್ರಾಂಡ್ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದಂತಾಗಿದೆ.
2017 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ (ಒಬಿಸಿ) ನಾಯಕರಾಗಿ ರಾಧಾನ್ಪುರ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಅಲ್ಪೇಶ್ ಠಾಕೂರ್, ತಮ್ಮ ಸಮುದಾಯದ ನಾಯಕರಿಗೆ ಕಾಂಗ್ರೆಸ್ ನಲ್ಲಿ ಅವಮಾನವಾಗುತ್ತಿದೆ ಎಂದು ಆರೋಪಿಸಿ ಎಪ್ರಿಲ್ 10 ರಂದು ಕಾಂಗ್ರೆಸ್ ಪಕ್ಷದ ತಮ್ಮ ಎಲ್ಲಾ ಸ್ಥಾನಗಳಿಗೆ ಅವರು ರಾಜೀನಾಮೆ ನೀಡಿದ್ದರು.
ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ ಠಾಕೂರ್, 2017ರ ವಿಧಾನಸಭಾ ಚುನಾವಣೆಯಲ್ಲಿ ಠಾಕೂರ್ ಸೇನೆಯ ಸಹಾಯದಿಂದ ಕಾಂಗ್ರೆಸ್ ಸುಮಾರು 43 ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು. ಆದರೆ, ಚುನಾವಣೆ ಬಳಿಕ ನಮ್ಮ ಯುವ ಜನರನ್ನು ಪಕ್ಕಕ್ಕೆ ಸರಿಸಲಾಗಿದೆ. ಅವರನ್ನು ಅವಮಾನಿಸಲಾಗುತ್ತಿದೆ. ನನ್ನ ಸಮುದಾಯದ ಯುವಜನರು ಕುಪಿತಗೊಂಡಿದ್ದಾರೆ. ನನ್ನ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ, ಅವರು ಅವಮಾನಕ್ಕೊಳಗಾಗುತ್ತಿದ್ದರೆ, ಅವರಿಗೆ ಮೊಸವಾಗುತ್ತಿದ್ದರೆ, ನನಗೆ ಅದನ್ನು ಸಹಿಸಲು ಸಾಧ್ಯವಿಲ್ಲ. ನನಗೆ ಠಾಕೂರ್ ಸೇನೆ ಸರ್ವೋತ್ಕೃಷ್ಟವಾಗಿದೆ. ಪಕ್ಷದ ಪ್ರಮುಖರಲ್ಲಿ ನಮ್ಮ ಯುವ ಸಮುದಾಯಕ್ಕೆ ಸೂಕ್ತ ಸ್ಥಾನ ನೀಡುವಂತೆ ಪದೇ-ಪದೇ ಬೇಡಿಕೆ ಇಟ್ಟಿದ್ದೇನೆ. ಯಾವುದಕ್ಕೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದರು.
ಅದಾಗ್ಯೂ ಠಾಕೂರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದಾಗಲಿ ಅಥವಾ ವಿಧಾನಸಭಾ ಸದಸ್ಯತ್ವಕ್ಕಾಗಲಿ ರಾಜೀನಾಮೆ ನೀಡಿಲ್ಲ.