ಬೆಂಗಳೂರು: 1996ರಿಂದಲೂ ಸಂಸದರಾಗಿದ್ದ ಸಚಿವ ಹೆಚ್.ಎನ್. ಅನಂತ್ ಕುಮಾರ್, ಬೆಂಗಳೂರು ದಕ್ಷಿಣ ಕ್ಷೇತ್ರದಿಂದಲೇ ಸತತ ಆರು ಬಾರಿ ಆಯ್ಕೆಯಾಗಿದ್ದರು. ಕ್ಷೇತ್ರದ ಜನರ ಸಮಸ್ಯೆ ಮತ್ತು ಕ್ಷೇತ್ರಾಭಿವೃದ್ಧಿಗೆ ಕ್ಷಣದಲ್ಲೇ ಪರಿಹಾರ ಕೈಗೊಳ್ಳುತ್ತಿದ್ದರು. ಇವರು ಸಾಮಾನ್ಯ ಜನರ ಧ್ವನಿಯಾಗಿ ಸಂಸತ್​ನಲ್ಲಿ ಕೆಲಸ ನಿರ್ವಹಿಸಿದ್ದರು. ಅನಂತ್ ಕುಮಾರ್ ಕೇಂದ್ರ ಸಂಪುಟದಲ್ಲಿ 10 ವಿಭಿನ್ನ ಖಾತೆಗಳನ್ನು ನಿರ್ವಹಿಸಿದ್ದ ಏಕೈಕ ರಾಜಕಾರಣಿಯಾಗಿದ್ದರು.


COMMERCIAL BREAK
SCROLL TO CONTINUE READING

ಬಾಲ್ಯದಿಂದಲೂ RSS ತತ್ವಗಳಿಂದ ಪ್ರೇರಿತರಾಗಿದ್ದ ಅನಂತ್ ಕುಮಾರ್, ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉತ್ತಮ ಕೆಲಸಗಳಿಗಾಗಿ ಹೆಸರುವಾಸಿಯಾಗಿದ್ದರು. 


ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿ ನಾಯಕರ ಗೆಲುವಿಗೆ, ಪಕ್ಷದ ಬಲವರ್ಧನೆಗೆ ಅನಂತ್ ಕುಮಾರ್ ಅವರ ಕಾರ್ಯಕ್ಷಮತೆ, ಅವರ ಚಾತುರ್ಯತೆಯೇ ಕಾರಣವಾಗಿತ್ತು ಎಂದರೆ ತಪ್ಪಾಗಲಾರದು.


ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಪ್ರಬಲವಾಗಿ ಬೆಳೆಯಲು ಕಾರಣರಾದವರಲ್ಲಿ ಅನಂತಕುಮಾರ್ ಸಹ ಒಬ್ಬರು. ತಳಮಟ್ಟದಿಂದ ಪಕ್ಷವನ್ನು ಕಟ್ಟಿ, ಬೆಳೆಸಿದರು. ಈ ಮೂಲಕ ದಕ್ಷಿಣದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು.


ಕರ್ನಾಟಕ ಹಾಗೂ ದೆಹಲಿ ನಡುವಣ ಕೊಂಡಿ 'ಅನಂತ್ ಕುಮಾರ್':
ಕೇಂದ್ರದಲ್ಲಿ ಏನಾದರೂ ಕೆಲಸ ಆಗಬೇಕು ಅಂದರೆ ಅನಂತ್​  ಕುಮಾರ್ ಅವರನ್ನು ಹಿಡಿದರೆ ಕೆಲಸ ಆಗುತ್ತೆ ಎಂದು ಹಲವು ನಾಯಕರು ಹೇಳುತ್ತಾರೆ. ಹೌದು, ಅನಂತ್ ಕುಮಾರ್ ಕರ್ನಾಟಕ(ರಾಜ್ಯ) ಹಾಗೂ ದೆಹಲಿ(ಕೇಂದ್ರ) ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯದಿಂದ ಆಯ್ಕೆಯಾದ ಬೇರೆ ಬಿಜೆಪಿ ಸಂಸದರು, ಸಚಿವರು ಇದ್ದರೂ, ರಾಜ್ಯದ ಮುಖ್ಯಮಂತ್ರಿಗಳು, ಸಚಿವರುಗಳು ಕೇಂದ್ರದಿಂದ ಯಾವುದೇ ಕೆಲಸವಾಗಬೇಕಾದರೂ, ವಿವಿಧ ಕಾರ್ಯಗಳಿಗಾಗಿ ಅನಂತ ಕುಮಾರ್ ಅವರನ್ನೇ ಭೇಟಿ ಮಾಡಿ ಚರ್ಚಿಸುತ್ತಿದ್ದರು. ಕನ್ನಡಿಗರಿಗೆ ಯಾವುದೇ ಸಹಾಯದ ಅವಶ್ಯಕತೆ ಇದ್ದರೂ ಅನಂತ್ ಕುಮಾರ್ ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಿದ್ದರು.


ಯಾವುದೇ ಕೆಲಸ ಆಗಬೇಕಾದರೂ ಜನರು ನೇರವಾಗಿ ದೆಹಲಿಗೆ ತೆರಳಿ, ಅನಂತಕುಮಾರ್​ ಅವರನ್ನು ಭೇಟಿಯಾಗುತ್ತಿದ್ದರು. ಅವರು ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದರು. 


ಜನೌಷಧಿಯ ರೂವಾರಿ ಅನಂತ್ ಕುಮಾರ್ ಕೊಡುಗೆಗಳು:


  • ಬೇವು ಲೇಪಿತ ಯೂರಿಯಾ ಬಿಡುಗಡೆ ಮಾಡುವ ಮೂಲಕ ಭಾರತದ ರಸಗೊಬ್ಬರ ವಲಯದಲ್ಲಿ ಕ್ರಾಂತಿ. ಬೇವು ಲೇಪಿತ ಯೂರಿಯಾವನ್ನು ಹೆಚ್ಚು ಬಳಕೆಗೆ ತಂದ ಖ್ಯಾತಿ ಅನಂತಕುಮಾರ್‌ಗೆ ಸಲ್ಲುತ್ತದೆ. 

  • ಕೈಗೆಟುಕುವ ಬೆಲೆಯಲ್ಲಿ ಆರೋಗ್ಯ ಸೇವೆ ಒದಗಿಸಲು ಜನೌಷಧ ಕೇಂದ್ರಗಳನ್ನು ಸ್ಥಾಪಿಸುವಲ್ಲೂ ಅನಂತಕುಮಾರ್ ಸೇವೆ ಅನನ್ಯ.

  • ವಾಜಪೇಯಿ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದಾಗ ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಏರೋ ಬ್ರಿಡ್ಜಸ್ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳ ಅಭಿವೃದ್ಧಿ ಮೂಲಕ ಉನ್ನತೀಕರಿಸಿದ್ದರು.

  • ತನ್ನ ತಾಯಿ ಗಿರಿಜಾ ಶಾಸ್ತ್ರಿ ಸ್ಮರಣಾರ್ಥ ಅವರ ಪತ್ನಿ ಮುನ್ನಡೆಸುತ್ತಿರುವ ಸಾಮಾಜಿಕ ಸೇವೆಯ ಸರ್ಕಾರೇತರ ಸಂಸ್ಥೆ "ಅದಮ್ಯ ಚೇತನ"ದ ಹಿಂದಿನ ಪ್ರೇರಕ ಶಕ್ತಿ ಅನಂತ್ ಕುಮಾರ್.

  • 'ಮಿಡ್ ಡೇ ಮೀಲ್ಸ್' ಆರಂಭಿಸಿದ ಅನಂತ್ ಕುಮಾರ್, ಬೆಂಗಳೂರಿನಲ್ಲಿ 2003ರಿಂದಲೂ ಪ್ರತಿ ನಿತ್ಯ 72 ಸಾವಿರಕ್ಕೂ ಅಧಿಕ ಮಕ್ಕಳಿಗೆ ಮಧ್ಯಾಹ್ನದ ಪೌಷ್ಟಿಕಾಂಶಯುಕ್ತ ಊಟವನ್ನು ಒದಗಿಸುತ್ತಿದ್ದರು. 

  • 'ನಮ್ಮ ಮೆಟ್ರೋ' ಕನಸು ನನಸಾಗಲು ಅನಂತ್​ ಕುಮಾರ್ ಮೂಲ ಕಾರಣೀಕರ್ತರು. 

  • ರಸಗೊಬ್ಬರು ಆಮದು ಮಾಡಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿರುವ ದೇಶವನ್ನು 2022ರ ವೇಳೆಗೆ ರಸಗೊಬ್ಬರು ರಫ್ತು ಮಾಡುವುದರಲ್ಲಿ ಮುಂಚೂಣಿಗೆ ತರುವ ಪ್ರಯತ್ನ ಪ್ರಗತಿಯಲ್ಲಿರುವುದು ಅನಂತ್ ಅವರ ಶ್ರಮದ ಪ್ರತಿಫಲ.

  • 1.5 ಲಕ್ಷ ರೂ.ನಷ್ಟು ವೆಚ್ಚ ತಗುಲುತ್ತಿದ್ದ ಹೃದಯದ ಸ್ಟೆಂಟ್ ಅನ್ನು 28,000 ರೂ.ಗಳಿಗೆ ಲಭ್ಯವಾಗುವಂತೆ ಮಾಡಿದ್ದು ಅನಂತ್ ಕುಮಾರ್ ಅವರ ಮಹತ್ವದ ಸಾಧನೆ.

  • ಬೆಂಗಳೂರಿಗೆ ಕಾವೇರಿ ನಾಲ್ಕನೆ ಹಂತದ ನೀರು ತರುವುದರಲ್ಲಿ ಅನಂತ ಕುಮಾರ್ ಕೆಲಸ ಮಾಡಿದ್ದರು.