ಅಮರಾವತಿ : ಕೇಂದ್ರ ಸರ್ಕಾರವು ತನ್ನ ಸಾಮಾನ್ಯ ಬಜೆಟ್ 2018ರಲ್ಲಿ ಆಂಧ್ರ ಪ್ರದೇಶವನ್ನು ಕಡೆಗಣಿಸಿದ್ದು, ಯಾವುದೇ ಅನುದಾನ ನೀಡದ ಸರ್ಕಾರದ ನಡೆಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಗುರುವಾರ ಆಂಧ್ರ ಪ್ರದೇಶ ಬಂದ್ ಕರೆ ನೀಡಿದ್ದು, ಬಂದ್ ನಿಂದಾಗಿ ರಾಜ್ಯಾದ್ಯಂತ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.


COMMERCIAL BREAK
SCROLL TO CONTINUE READING

ಆಂಧ್ರ ಪ್ರದೇಶ ಪುನರ್‌ ಸಂಘಟನೆ ಕಾಯಿದೆಯನ್ನು ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರ್ಕಾರದ ವೈಫ‌ಲ್ಯವನ್ನು ಪ್ರತಿಭಟಿಸಿ ಇಂದು ಬೆಳಿಗ್ಗೆಯಿಂದ ಬಂದ್ ಆರಂಭವಾಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. 


ರಾಜ್ಯದ ಶ್ರೀಕಾಕುಲಂ, ವಿಜಯನಗರಂ ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣಾ ಮತ್ತು ಗುಂಟೂರು ಜಿಲ್ಲೆಗಳು, ಪ್ರಕಾಶಂ ಜಿಲ್ಲೆಯ ನೆಲ್ಲೂರು, ಕರ್ನೂಲ್, ಚಿತ್ತೂರು ಮತ್ತು ಅನಂತಪುರ ವಿಶಾಖಪಟ್ಟಣ ಪ್ರದೇಶಗಳಲ್ಲಿ, ಕಡಪ ಜಿಲ್ಲೆಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 


ರಾಯಲಸೀಮಾ ಪ್ರದೇಶದಲ್ಲಿ ಖಾಸಗಿ ಸಂಸ್ಥೆಗಳು, ಪ್ರತಿನಿಧಿಗಳು ಜೊತೆಯಲ್ಲಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಅನಂತಪುರ್ ಜವಾಹರಲಾಲ್ ನೆಹರು ಟೆಕ್ನಾಲಜಿ ಯೂನಿವರ್ಸಿಟಿ, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯಾದ್ಯಂತದ ಶಾಲೆ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.  


ಈ ಮಧ್ಯೆ ತೆಲುಗು ದೇಶಂ ಪಕ್ಷ ಸಹ ರಾಜ್ಯದ ಹಕ್ಕುಗಳಿಗಾಗಿ ಇಂದು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯಾದ್ಯಂತ ತನ್ನ ಸಂಸದರಿಗೆ ಬೆಂಬಲ ಸೂಚಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುವ ರ್ಯಾಲಿಗಳನ್ನು ನಡೆಸುತ್ತಿದೆ. ಈ ಹೋರಾಟಕ್ಕಾಗಿ ರಾಜ್ಯದ ಜನರು ಒಗ್ಗಟ್ಟಿನಿಂದ ಬೆಂಬಲಿಸಬೇಕು ಎಂದು ಟಿಡಿಪಿ ಅಧ್ಯಕ್ಷ ಹಾಗೂ ಇಂಧನ ಸಚಿವ ಕಿಮಿಡಿ ಕಲಾ ವೆಂಕಟ ರಾವ್‌ ಕರೆ ನೀಡಿದ್ದಾರೆ.