ಅಮರಾವತಿ: ಆಂಧ್ರಪ್ರದೇಶ ವಿಭಜನೆಯ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆ ನಡೆಯುತ್ತಿದ್ದು 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭಾ ಸ್ಥಾನಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಹಲವೆಡೆ ಇವಿಎಂನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಮತದಾನ ವಿಳಂಬವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬ ರಾಜ್ಯ ರಾಜಧಾನಿ ಅಮರಾವತಿಯ ಉಡಾವಲ್ಲಿ ಗ್ರಾಮದಲ್ಲಿನ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿದರು. ನಾಯ್ಡು ಪುತ್ರ ನಾರಾ ಲೋಕೇಶ್ ಅವರು ಮಂಗಳಗಿರಿ ವಿಧಾನಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.


ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್.ಜಗ್ಮೋಹನ್ ರೆಡ್ಡಿ ಕಡಪ ಜಿಲ್ಲೆಯ ಪುಲಿವೆಂದುಲದ ತನ್ನ ಸ್ಥಳೀಯ ಗ್ರಾಮದಲ್ಲಿ ಮತ ಚಲಾಯಿಸಿದರು. 


ಇದೇ ಸಂದರ್ಭದಲ್ಲಿ ತಡಪಲ್ಲಿ ಗ್ರಾಮದಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಗೋಪಾಲ್ ಕೃಷ್ಣ ದ್ವಿವೇದಿ, ಸುಮಾರು 50 ಸ್ಥಳಗಳಲ್ಲಿ ಇವಿಎಂ ತಾಂತ್ರಿಕ ದೋಷದ ಕುರಿತು ದೂರುಗಳನ್ನು ಸ್ವೀಕರಿಸಲಾಗಿದೆ. ಈಗಾಗಲೇ ತಾಂತ್ರಿಕ ತಂಡವು ಮತಕೇಂದ್ರಗಳಿಗೆ ತೆರಳಿ ಸಮಸ್ಯೆ ಬಗೆಹರಿಸುವ ಕಾರ್ಯ ಆರಂಭಿಸಿದ್ದಾರೆ ಎಂದರು. 


ಆಂಧ್ರಪ್ರದೇಶದಲ್ಲಿ ಒಟ್ಟು 3,93,45,717 ಮತದಾರರಿದ್ದು, 1,94,62,339 ಪುರುಷರು, 1,98,79,421 ಮಹಿಳೆಯರು ಮತ್ತು 3,957 ತೃತೀಯಲಿಂಗಿಗಳಿದ್ದಾರೆ. ಈ 18-19ರ ಪ್ರಾಯದ 10.5 ಲಕ್ಷ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ.


ರಾಜ್ಯದಲ್ಲಿ 25 ಲೋಕಸಭಾ ಸ್ಥಾನಗಳಿಗೆ 319 ಅಭ್ಯರ್ಥಿಗಳು ಮತ್ತು ವಿಧಾನಸಭೆಯಲ್ಲಿ 175 ಸ್ಥಾನಗಳಿಗೆ 2,118 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಒಟ್ಟು 46,120 ಮತಗಟ್ಟೆಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದ್ದು, ಅದರಲ್ಲಿ 8,514 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.