ಭಾರತೀಯ ಶಿಕ್ಷಣದ ಬಿಕ್ಕಟ್ಟು: ಒಂದು ವಿಷಾದನೀಯ ಹಿನ್ನಡೆ
Annual Status of Education Report: ಇತ್ತೀಚೆಗೆ ಪ್ರಕಟವಾದ, ಹದಿಹರೆಯದವರಲ್ಲಿ ಅರಿವಿನ ಕೌಶಲ್ಯದ ಕುರಿತ ಎರಡು ಅಧ್ಯಯನಗಳಾದ, ಆ್ಯನುವಲ್ ಸ್ಟೇಟಸ್ ಆಫ್ ಎಜುಕೇಶನ್ ರಿಪೋರ್ಟ್ (ಎಎಸ್ಇಆರ್) ಭಾರತೀಯ ಶಾಲಾ ಶಿಕ್ಷಣದಲ್ಲಿ ಎದುರಾಗಿರುವ ಆತಂಕಕಾರಿ ಪರಿಸ್ಥಿತಿಯನ್ನು ತೋರಿಸುತ್ತಿದೆ.
ಮೊದಲನೆಯ ಅಧ್ಯಯನವನ್ನು ಪ್ರಥಮ್ ಎಂಬ ಸಂಸ್ಥೆ ನಡೆಸಿದ್ದು, ಹದಿಹರೆಯದವರ ಆಲೋಚನಾ ಸಾಮರ್ಥ್ಯದ ಕುರಿತು ಗಮನ ಹರಿಸಿದೆ. ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್ಎಸ್) ನಡೆಸಿರುವ ಎರಡನೇ ಅಧ್ಯಯನ ಶಿಕ್ಷಕರ ಗುಣಮಟ್ಟವನ್ನು ಕೇಂದ್ರೀಕರಿಸಿದೆ.
'ಬಿಯಾಂಡ್ ಬೇಸಿಕ್ಸ್' ಎಂಬ ಹೆಸರಿನ ಮೊದಲನೆಯ ವರದಿ, ಬಹುತೇಕ 25%ದಷ್ಟು 14-18 ವರ್ಷ ವಯೋಮಾನದ ಮಕ್ಕಳಿಗೆ ತಮ್ಮದೇ ಭಾಷೆಯಲ್ಲಿರುವ, ಎರಡನೇ ತರಗತಿಯ ಮಟ್ಟದ ಪಠ್ಯವನ್ನು ಸುಲಭವಾಗಿ ಓದಲು ಸಾಧ್ಯವಾಗುವುದಿಲ್ಲ! ಅದರೊಡನೆ, ಗ್ರಾಮೀಣ ಭಾರತದಲ್ಲಿರುವ 50%ಕ್ಕೂ ಹೆಚ್ಚು ಮಕ್ಕಳಿಗೆ ಮೂಲಭೂತ ಗಣಿತಶಾಸ್ತ್ರ ಕಷ್ಟಕರವೆನಿಸುತ್ತದೆ.
ಇದನ್ನೂ ಓದಿ-Ram Mandir: ರಾಮ್ ಲಲ್ಲಾ ಭಕ್ತರಿಗೊಂದು ಮಹತ್ವದ ಅಪ್ಡೇಟ್! ಮಂಗಳವಾರದಿಂದ ಬದಲಾಗಲಿದೆ ದರುಶನದ ವೇಳೆ
ಬಹಳಷ್ಟು ಸಮಯದಲ್ಲಿ, ವೈವಿಧ್ಯಮಯ ವ್ಯಾಪ್ತಿಯ ಅಂಕಿ ಅಂಶಗಳನ್ನು ಒಳಗೊಂಡಿರುವ ಈ ಫಲಿತಾಂಶಗಳು, ನಿಜವಾಗಿಯೂ 2019-21ರ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ-5 (ಎನ್ಎಫ್ಎಚ್ಎಸ್-5) ಹೇಳಿರುವಂತೆ ಭಾರತದ ಸಾಕ್ಷರತಾ ಮಟ್ಟ 77.7% ಇದೆಯೇ ಎಂಬ ಕುರಿತು ಅನುಮಾನ ಮೂಡಿಸುತ್ತದೆ. ಮೂಲಭೂತ ಕೌಶಲಗಳಾದ ಓದು, ಬರವಣಿಗೆ ಮತ್ತು ಅಂಕಗಣಿತದ ಜ್ಞಾನವನ್ನು ಒಳಗೊಂಡಿರದ ಸಾಕ್ಷರತೆ ಪರಿಣಾಮಕಾರಿಯಾಗಿರುವುದಿಲ್ಲ.
ಶಿಕ್ಷಕರು, ಶಿಕ್ಷಣ ಮತ್ತು ಶಿಕ್ಷಕರ ಶೈಕ್ಷಣಿಕ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ಟಿಐಎಸ್ಎಸ್ ವರದಿ ಅತ್ಯಂತ ಕಳವಳಕಾರಿಯಾಗಿದ್ದು, ಎಎಸ್ಇಆರ್ ವರದಿಯ ಹೊಳಹುಗಳ ಮೇಲೆ ಬೆಳಕು ಚೆಲ್ಲುತ್ತದೆ.
ಟಿಐಎಸ್ಎಸ್ ವರದಿಯ ಪ್ರಕಾರ, ಭಾರತದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿರುವ 35-41% ಗಣಿತ ಶಿಕ್ಷಕರು ತಮ್ಮ ಪದವಿ ಅಧ್ಯಯನದ ಸಂದರ್ಭದಲ್ಲಿ ಗಣಿತ ಅಧ್ಯಯನ ನಡೆಸಿಲ್ಲದಿರುವುದರಿಂದ, ಅವರಿಗೆ ಗಣಿತ ಪಾಠ ಮಾಡಲು ಬೇಕಾದ ಅವಶ್ಯಕ ಕೌಶಲಗಳಿಲ್ಲ.
ಸರಳವಾಗಿ ಹೇಳುವುದಾದರೆ, ಗುಣಮಟ್ಟದ ಶಿಕ್ಷಕರ ಕೊರತೆ ಪ್ರಾಥಮಿಕ ಶಾಲೆಯಲ್ಲಿ ಅತಿದೊಡ್ಡ ತೊಂದರೆಯಾಗಿದ್ದು, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಸಮಸ್ಯೆ ಕೊಂಚ ಸುಧಾರಿಸುತ್ತದೆ. ಆದರೂ, ಗಣಿತದ ವಿಚಾರಕ್ಕೆ ಬಂದರೆ ಪರಿಸ್ಥಿತಿ ಗಂಭೀರವಾಗಿಯೇ ಇದೆ. ಆರಂಭಿಕ ಹಂತದಲ್ಲೇ ಉಂಟಾಗುವ ಕೊರತೆಗಳನ್ನು ನಂತರದ ಹಂತಗಳಲ್ಲಿ ಸರಿದೂಗಿಸುವುದು ಅತ್ಯಂತ ಪ್ರಯಾಸಕರ ವಿಚಾರವಾಗಿದೆ.
ಎಎಸ್ಇಆರ್ ವರದಿಯ ಪ್ರಕಾರ, 14ರಿಂದ 18 ವಯೋಮಾನದವರಲ್ಲಿ ಕೇವಲ 43% ಮಾತ್ರವೇ ಸರಳ ಭಾಗಾಕಾರವನ್ನು (ಮೂರು ಅಂಕಿಗಳ ಸಂಖ್ಯೆಯನ್ನು ಒಂದು ಅಂಕೆಯಿಂದ ಭಾಗಿಸುವುದು) ನಡೆಸಲು ಸಮರ್ಥರಿದ್ದಾರೆ. ಸಾಮಾನ್ಯವಾಗಿ ಈ ಕೌಶಲವನ್ನು 3ನೇ ತರಗತಿ ಅಥವಾ ನಾಲ್ಕನೇ ತರಗತಿಯಲ್ಲಿ ವಿದ್ಯಾರ್ಥಿಗಳು ಗಳಿಸಬೇಕಾಗಿರುತ್ತದೆ. ಇದೇ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಓದುವುದೂ ಪ್ರಯಾಸಕರವಾಗಿರುತ್ತದೆ. ಎಎಸ್ಇಆರ್ ವರದಿ ಈ ಪ್ರಮಾಣವನ್ನು 47% ಎಂದಿದೆ. 50%ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಇತಿಹಾಸ ಮತ್ತು ಭಾಷಾ ವಿಷಯಗಳಲ್ಲಿ, ಸಂಕೀರ್ಣ ವಿಚಾರಗಳು ಮತ್ತು ಕಷ್ಟಕರ ಬರಹಗಳನ್ನು ಅರ್ಥ ಮಾಡಿಕೊಳ್ಳುವುದೂ ಸವಾಲಾಗಿದೆ. ಭಾರತದ ಶಾಲಾ ಶಿಕ್ಷಣ ವ್ಯವಸ್ಥೆ, ಅದರಲ್ಲೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲಾ ಶಿಕ್ಷಣದ ಪರಿಸ್ಥಿತಿಯಂತೂ ಬಹಳಷ್ಟು ಕೆಟ್ಟದಾಗಿದೆ. ತನ್ನ ಅಭಿವೃದ್ಧಿಗಾಗಿ ಯುವ ಜನತೆಯ ಮೇಲೆ ಅವಲಂಬಿಸಿರುವ ಭಾರತದಂತಹ ದೇಶಕ್ಕೆ ಇದು ದೊಡ್ಡ ಸಮಸ್ಯೆಯಾಗಿದೆ.
ಆಶ್ಚರ್ಯಕರ ವಿಚಾರವೆಂದರೆ, ಎಎಸ್ಇಆರ್ ವರದಿಯ ಪ್ರಕಾರ, ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಹಣ ವಿನಿಯೋಗಿಸುತ್ತಾ ಬಂದಿದ್ದರೂ, ಈ ಸಮಸ್ಯೆ ಅತ್ಯಂತ ದೀರ್ಘಾವಧಿಯಿಂದ ಮುಂದುವರಿಯುತ್ತಾ ಬಂದಿದೆ. 2022ರಲ್ಲಿ ಶಿಕ್ಷಣ ಸಚಿವಾಲಯ ನೀಡಿದ ವರದಿಯ ಪ್ರಕಾರ, ರಾಜ್ಯಗಳು ತಮ್ಮ ಶೈಕ್ಷಣಿಕ ಬಜೆಟ್‌ನ ಬಹುತೇಕ 80% ಮೊತ್ತವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ವಿನಿಯೋಗಿಸುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಗಳ ಪ್ರಕಾರ, ರಾಜ್ಯಗಳು ಈಗ ಶಿಕ್ಷಣದ ಮೇಲೆ ನಡೆಸುವ ವೆಚ್ಚವನ್ನು ಕಡಿಮೆಗೊಳಿಸಿವೆ. 2014-15ರಲ್ಲಿ, ಅವುಗಳು ತಮ್ಮ ಒಟ್ಟು ಬಜೆಟ್‌ನ 16%ವನ್ನು ಶಿಕ್ಷಣಕ್ಕೆ ವೆಚ್ಚ ಮಾಡಿದ್ದವು. ಆದರೆ, ಆ ಪ್ರಮಾಣ ಈಗ 13.3%ಕ್ಕೆ ಇಳಿದಿದೆ. ಇದರಲ್ಲಿ ದಕ್ಷಿಣದ ರಾಜ್ಯಗಳು ನಡೆಸಿರುವ ಹೆಚ್ಚಿನ ಕಡಿತ, ಮತ್ತು ಪಂಜಾಬ್ (9.2%) ಮತ್ತು ಅರುಣಾಚಲ ಪ್ರದೇಶ (9.7%) ಕಡಿತಗಳೂ ಸೇರಿವೆ. ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳು ಶಿಕ್ಷಣದ ಮೇಲೆ ಮಾಡುವ ವೆಚ್ಚ ಭಾರತದ ರಾಷ್ಟ್ರೀಯ ಸರಾಸರಿಗಿಂತ ಬಹಳಷ್ಟು ಕಡಿಮೆಯಾಗಿದೆ.
ಇದನ್ನೂ ಓದಿ-ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಜೀವ ಪ್ರತಿಷ್ಟಾನ- ಬೆಂಗಳೂರಿನಲ್ಲಿ ಎಲ್ಲೆಲ್ಲೂ ರಾಮನಾಮ..!!
2023-24ರ ಅವಧಿಯಲ್ಲಿ, ಕರ್ನಾಟಕ ಸರ್ಕಾರ ಶಿಕ್ಷಣಕ್ಕಾಗಿ 37,587 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಇದು ಕರ್ನಾಟಕದ ಬಜೆಟ್‌ನ ಬಹುತೇಕ 11% ಆಗಿದೆ. ಆದರೆ, ಬಿಹಾರ, ಛತ್ತೀಸ್ಗಢ, ಹಾಗೂ ರಾಜಸ್ಥಾನದಂತಹ ರಾಜ್ಯಗಳು ತಮ್ಮ ಶೈಕ್ಷಣಿಕ ವೆಚ್ಚವನ್ನು ಕಳೆದ 15 ವರ್ಷಗಳಲ್ಲಿ ಹೆಚ್ಚಿಸಿದ್ದರೂ, ಹೇಳಿಕೊಳ್ಳುವಂತಹ ಅಭಿವೃದ್ಧಿ ಏನೂ ಸಾಧಿತವಾಗಿಲ್ಲ. ಶಿಕ್ಷಣದ ಗುಣಮಟ್ಟ ಎಷ್ಟು ಹಣ ವೆಚ್ಚ ಮಾಡಲಾಗಿದೆ ಎನ್ನುವುದಕ್ಕಿಂತಲೂ, ಆ ಹಣವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಲಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಶೈಕ್ಷಣಿಕ ವಲಯದಲ್ಲಿನ ಸಮಸ್ಯೆಗಳಿಗೆ ತಪ್ಪಾದ ನೀತಿಗಳ ಆಯ್ಕೆಗಳೂ ಕಾರಣವಾಗಿವೆ. ಜನರನ್ನು ಜಾತಿ, ಮತ, ಧರ್ಮಗಳು, ಉಚಿತ ಕೊಡುಗೆಗಳ ಆಧಾರದಲ್ಲಿ ಕ್ಷಿಪ್ರವಾಗಿ ಮೆಚ್ಚಿಸಲು ಪ್ರಯತ್ನ ನಡೆಸುವುದೂ ದೇಶಾದ್ಯಂತ ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.