ದೆಹಲಿ ಮೆಟ್ರೋ, ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತ, 2-3 ತಿಂಗಳಲ್ಲಿ ಯೋಜನೆ ಜಾರಿ
2019 ರ ಲೋಕಸಭೆ ಚುನಾವಣೆಯಲ್ಲಿ ಸೋಲಿನ ನಂತರ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಅರವಿಂದ್ ಕೇಜ್ರಿವಾಲ್ ಸರ್ಕಾರವು ಮಹಿಳೆಯರ ವಿಶ್ವಾಸ ಗೆಲ್ಲಲು ಬೃಹತ್ ಯೋಜನೆಯನ್ನು ಜಾರಿಗೆ ತರುತ್ತಿದೆ.
ದೆಹಲಿ: ದೆಹಲಿ ಮೆಟ್ರೊ ಮತ್ತು ಡಿಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದರು. ದೆಹಲಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಮುಂದಿನ 2-3 ತಿಂಗಳುಗಳಲ್ಲಿ ಜಾರಿಗೆ ತರಲಾಗುವುದು ಎಂದು ಭರವಸೆ ಹೇಳಿದರು.
ಈ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ದೆಹಲಿಯ ಜನರಿಂದ ಸಲಹೆ ಸೂಚನೆ ಎದುರು ನೋಡುತ್ತಿರುವ ಬಗ್ಗೆ ತಿಳಿಸಿದರು. ನಿಮಗೆ ಯಾವುದೇ ಸಲಹೆಗಳಿದ್ದರೆ, ನೀವು delhiwomensafety@gmail.com ಗೆ ಮೇಲ್ ಕಳುಹಿಸಬಹುದು ಎಂದಿದ್ದಾರೆ.
ದೆಹಲಿ ಸರ್ಕಾರವು ಈ ವೆಚ್ಚವನ್ನು ಭರಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಒಟ್ಟಾರೆಯಾಗಿ ಮಹಿಳೆಯರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಇದರಿಂದಾಗಿ ಟ್ರಾಫಿಕ್ ಜಾಮ್ ಕಡಿಮೆಯಾಗುತ್ತದೆ. ಜೊತೆಗೆ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಮಾರ್ಟಿಯಲ್ಗಳೊಂದಿಗೆ ಅಳವಡಿಸಲಾಗಿದೆ. ಹೀಗಾಗಿ ಮಹಿಳೆಯರು ಬಸ್ ಮತ್ತು ಮೆಟ್ರೋಗಳಲ್ಲಿ ಸಂಚರಿಸುವುದರಿಂದ ಮಹಿಳೆಯರ ಪ್ರಯಾಣ ಸುರಕ್ಷಿತವಾಗಿರುತ್ತದೆ ಎಂದು ಅವರು ಹೇಳಿದರು.