ರಾಜಸ್ಥಾನ ಮುಖ್ಯಮಂತ್ರಿಯಾಗಿ ಅಶೋಕ್ ಗೆಹ್ಲೋಟ್, ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಪ್ರಮಾಣ ವಚನ ಸ್ವೀಕಾರ
ಗಾಂಧಿ-ನೆಹರೂ ಕುಟುಂಬದ ನಿಷ್ಠಾವಂತ ಎಂದೇ ಗುರುತಿಸಿಕೊಂಡಿರುವ ಅಶೋಕ್ ಗೆಹ್ಲೋಟ್ ಅವರು ಮೂರನೇ ಬಾರಿಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಜೈಪುರ: ರಾಜಸ್ಥಾನ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸಿಗ ಅಶೋಕ್ ಗೆಹ್ಲೋಟ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಸಚಿನ್ ಪೈಲಟ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ಇಲ್ಲಿನ ಅಲ್ಬರ್ಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಗಾಂಧಿ-ನೆಹರೂ ಕುಟುಂಬದ ನಿಷ್ಠಾವಂತ ಎಂದೇ ಗುರುತಿಸಿಕೊಂಡಿರುವ ಅಶೋಕ್ ಗೆಹ್ಲೋಟ್ ಅವರು ಮೂರನೇ ಬಾರಿಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
ಪಿ.ವಿ.ನರಸಿಂಹರಾವ್ ಮತ್ತು ರಾಜೀವ್ ಗಾಂಧಿ ಅಧಿಕಾರವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಗೆಹ್ಲೋಟ್, ಸದ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನದ ಪ್ರದೇಶ ಕಾಂಗ್ರೆಸ್ ಸಮಿತಿ ಅಧುಕ್ಷರಾಗಿ ನಾಲ್ಕು ಬಾರಿ, ಲೋಕಸಭೆ ಮತ್ತು ವಿಧಾನಸಭೆ ಸದಸ್ಯರಾಗಿ ಐದು ಬಾರಿ ಆಯ್ಕೆಯಾಗುವ ಮೂಲಕ ರಾಜಕಾರಣದಲ್ಲಿ ಉತ್ತಮ ಅನುಭವ ಗಳಿಸಿದ್ದಾರೆ.
ಉಪಮುಖ್ಯಮಂತ್ರಿ ಸಚಿನ್ ಪೈಲಟ್
ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿನ್ ಪೈಲೆಟ್ ಅವರು ದೇಶದಲ್ಲೇ ಅತೀ ಕಿರಿಯ ವಯಸ್ಸಿನ ಉಪಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಾಯುಸೇನೆಯಲ್ಲಿದ್ದ ರಾಜೇಶ್ವರ್ ಪ್ರಸಾದ್ ಸಿಂಗ್ ಅವರು ರಾಜೇಶ್ ಪೈಲಟ್ ಆಗಿ ಕಾಂಗ್ರೆಸ್ ಮುಖಂಡರಾಗಿ ಬೆಳೆದರು. ಇವರ ಪುತ್ರ ಸಚಿನ್ ಪೈಲಟ್ ಗೆ ಈಗ 41 ವರ್ಷ ವಯಸ್ಸು. ತಂದೆಯ ಅಕಾಲಿಕ ಮರಣದ ನಂತರ ರಾಜಕೀಯ ಪ್ರವೇಶಿಸಿದರು. ಮೊದಲಿಗೆ ದೌಸಾದಿಂದ 2004ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದವರು ನಂತರ 2009ರಲ್ಲಿ ಅಜ್ಮೇರ್ ನಿಂದ ಲೋಕಸಭೆಗೆ ಆಯ್ಕೆಯಾಗಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಕ್ಯಾಬಿನೆಟ್ ದರ್ಜೆ ಸಚಿವರಾದರು. ಈಗ 41 ವರ್ಷ ವಯಸ್ಸಿಗೆ ಉಪ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಯಾದವ್, ಎಲ್ ಜೆಡಿ ನಾಯಕ ಶರದ್ ಯಾದವ್, ಜಮ್ಮು ಮತ್ತು ಕಾಶ್ಮೀರದ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆರ್'ಜೆಡಿ ನಾಯಕ ತೇಜಸ್ವಿ ಯಾದವ್, ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್, ಜೆಎಂಎಂ ನಾಯಕ ಹೇಮಂತ್ ಸೊರೆನ್, ಡೆವಿಎಂ ನಾಯಕ ಬಾಬುಲಾಲ್ ಮರಂಡಿ ಮತ್ತಿತರರು ಹಾಜರಿದ್ದರು.
ರಾಜಸ್ಥಾನದ 200 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಡಿಸೆಂಬರ್ 7 ರಂದು ಮತದಾನ ನಡೆದಿತ್ತು. ಡಿಸೆಂಬರ್ 11 ರಂದು ಫಲಿತಾಂಶ ಹೊರಬಿದ್ದ ಫಲಿತಾಂಶದಲ್ಲಿ 99 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್, ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆ ಹಕ್ಕು ಪಡೆದುಕೊಂಡಿದೆ.