ಅಸ್ಸಾಂ: ನೆರೆಯಿಂದ ಪ್ರಭಾವಿತಕ್ಕೊಳಗಾದ 54 ಲಕ್ಷ ಜನರು, ಕಾಜಿರಂಗಾ ನ್ಯಾಷನಲ್ ಪಾರ್ಕ್ ನಲ್ಲಿ 96 ಪ್ರಾಣಿಗಳ ಸಾವು
ಕಾಜಿರಂಗಾ ನ್ಯಾಷನಲ್ ಪಾರ್ಕ್ ನ ಶೇ.85ರಷ್ಟು ಪ್ರದೇಶ ನೆರೆಯಿಂದ ಮುಳುಗಿಹೋಗಿದೆ
ಗುವಾಹಾಟಿ:ಈಶಾನ್ಯ ರಾಜ್ಯ ಅಸ್ಸಾಂ ನೆರೆಯಿಂದ ತತ್ತರಿಸಿಹೋಗಿ ಅತಿ ಹೆಚ್ಚು ಪ್ರಭಾವಕ್ಕೆ ತುತ್ತಾಗಿದೆ. ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಇದುವರೆಗೆ 79 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ, ಅನೇಕ ಜನರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಕ್ಕಿಬಿದ್ದಿದ್ದಾರೆ, ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ. ಈ ಪ್ರವಾಹದಿಂದ ಮಾನವ ಜೀವನ ಮಾತ್ರವಲ್ಲ, ಪ್ರಾಣಿ ಸಂಕುಲದ ಮೇಲೂ ಸಹ ಪ್ರಭಾವ ಬೀರಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯ ಪ್ರಕಾರ, ಬ್ರಹ್ಮಪುತ್ರ ನದಿ ಅನೇಕ ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಸ್ಸಾಂನ 30 ಜಿಲ್ಲೆಗಳು ಪ್ರವಾಹದ ಹಿಡಿತದಲ್ಲಿದ್ದು, 54 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಎನ್‌ಡಿಆರ್‌ಎಫ್ ತಂಡಗಳು ಸಹ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ರಾಜ್ಯದ ಗೋಲಘಾಟ್‌ನಲ್ಲಿರುವ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಶೇ.85ರಷ್ಟು ಪ್ರವಾಹದಲ್ಲಿ ಮುಳುಗಿದೆ. ಈ ಕಾರಣದಿಂದಾಗಿ, ಇಲ್ಲಿ ಸಂರಕ್ಷಿತ ಕಾಡು ಪ್ರಭೇದಗಳ ಅಸ್ತಿತ್ವದ ಬಗ್ಗೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಇದುವರೆಗೆ 96 ಪ್ರಾಣಿಗಳು ಸಾವನ್ನಪ್ಪಿವೆ ಮತ್ತು 132 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಪ್ರವಾಹದಂತಹ ಪರಿಸ್ಥಿತಿಯಲ್ಲಿ, ಪ್ರಾಣಿಗಳಿಗೆ ದೊಡ್ಡ ಬಿಕ್ಕಟ್ಟು ಎದುರಾಗುತ್ತದೆ. ಪ್ರಾಣಿಗಳಿಗಾಗಿ ಅನೇಕ ರೀತಿಯ ಅಭಿಯಾನಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಆದರೆ, ಅಸ್ಸಾಂನ ಪರಿಸ್ಥಿತಿ ಸುದಾರಿಸಲು ಇನ್ನೂ ಕಾಲಾವಕಾಶ ಬೇಕಾಗಲಿದೆ.