ಅಸ್ಸಾಂ ಕಳ್ಳಭಟ್ಟಿ ದುರಂತ: 80 ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳಭಟ್ಟಿ ಮದ್ಯವನ್ನು ಸೇವಿಸಿ ಮೃತರಾಗಿದ್ದಾರೆ.
ಗುವಾಹಟಿ: ಗೋಲಾಘಾಟ್ ಮತ್ತು ಜೋರ್ಹತ್ ಜಿಲ್ಲೆಗಳಲ್ಲಿ ಚಹಾ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರು ಕಳ್ಳಭಟ್ಟಿ ಮದ್ಯವನ್ನು ಸೇವಿಸಿ ಈವರೆಗೂ 80 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ಇನ್ನೂ ನಿರ್ಣಾಯಕ ಸ್ಥಿತಿಯಲ್ಲಿದ್ದು ಅವರನ್ನು ಜೋರ್ಹತ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಸ್ಸಾಂ ಆರೋಗ್ಯ ಇಲಾಖೆ ಶನಿವಾರ ದೃಢಪಡಿಸಿದೆ.
ಈ ದುರಂತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಗೋಲಾಘಾಟ್ ಮತ್ತು ಜೋರ್ಹತ್ ಜಿಲ್ಲೆಗಳಲ್ಲಿ ಸತ್ತವರ ಸಂಖ್ಯೆ 59 ಮತ್ತು 200 ಜನರನ್ನು ಆಸ್ಪತ್ರೆಗಳಿಗೆ ದಾಖಲಾಗಿದ್ದು, ಸಾವಿನ ಸಂಖ್ಯೆ ನಿಮಿಷದಿಂದ ನಿಮಿಷಕ್ಕೆ ಬದಲಾಗುತ್ತಿದೆ ಎಂದು ಇಂದು ಆಸ್ಪತ್ರೆಯಲ್ಲಿ ರೋಗಿಗಳನ್ನು ಭೇಟಿ ಮಾಡಿದ ಬಳಿಕ ವರದಿಗಾರರಿಗೆ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ನಿರ್ದೇಶಕ ಅನುಪ್ ಬರ್ಮನ್ ಮೇಲ್ವಿಚಾರಣೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶರ್ಮಾ ತಿಳಿಸಿದ್ದಾರೆ.
15 ಮಹಿಳೆಯರ ಸಾವನ್ನು ದೃಢಪಡಿಸಿರುವ ಅಧಿಕಾರಿಗಳು, ಆಸ್ಪತ್ರೆಗೆ ದಾಖಲಾಗಿರುವ ಸುಮಾರು 200 ಜನರಲ್ಲಿ ಕನಿಷ್ಠ 36 ಮಂದಿ ಮಹಿಳೆಯರು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ್ ನಲ್ಲಿ ವಿಷಪೂರಿತ ಮದ್ಯ ಸೇವಿಸಿ 100ಕ್ಕೂ ಹೆಚ್ಚು ಬಲಿಯಾದ ಎರಡೇ ವಾರಗಳಲ್ಲಿ, ಅಸ್ಸಾಂನಲ್ಲಿ ಕಳ್ಳಭಟ್ಟಿ ಮದ್ಯ ಸೇವನೆಯಿಂದಾಗಿಯೇ ಮತ್ತೊಂದು ಭಾರೀ ದುರ್ಘಟನೆ ನಡೆದಿದೆ.