ರಾಜ್ಯದ ಎಂಟು ನದಿಗಳಲ್ಲಿ ಅಟಲ್ ಜೀ ಅಸ್ಥಿ ವಿಸರ್ಜನೆ
ಆಗಸ್ಟ್ 23 ಮತ್ತು 25 ರಂದು ರಾಜ್ಯದ ಎಂಟು ನದಿಗಳಲ್ಲಿ ಅಟಲ್ ಜೀ ಅವರ ಅಸ್ಥಿಯನ್ನು ವಿಸರ್ಜಿಸಲಾಗುವುದು.
ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ರಾಜ್ಯದ ಎಂಟು ನದಿಗಳಲ್ಲಿ ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದ್ದು, ನಿನ್ನೆ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಸ್ಥಿ ಕಳಸವನ್ನು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮೆರವಣಿಗೆ ಮೂಲಕ ಜಗನ್ನಾಥ ಭವನಕ್ಕೆ ತರಲಾಗಿದೆ. ಕರ್ನಾಟಕದ ಕಾವೇರಿ, ನೇತ್ರಾವತಿ, ಮಲಪ್ರಭ, ಕೃಷ್ಣ, ಕಾರಂಜಾ, ತುಂಗಭದ್ರಾ, ಶರಾವತಿ, ತುಂಗಾ ಸೇರಿದಂತೆ ದೇಶದ ಹಲವು ನದಿಗಳಲ್ಲಿ ಅಟಲ್ ಜೀ ಅಸ್ಥಿಯನ್ನು ವಿಸರ್ಜಿಸಲಾಗುತ್ತದೆ.
ಇಂದು ಬೆಳಗ್ಗೆ 09 ಗಂಟೆ ಸುಮಾರಿಗೆ ಪಕ್ಷದ ಕಚೇರಿಯಿಂದ ಅಸ್ಥಿ ಕಲಶ ಹೊರಡಲಿದ್ದು ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮಾರ್ಗವಾಗ ಶ್ರೀರಂಗಪಟ್ಟಣ ತಲುಪಿ ಕಾವೇರಿ ನದಿಯಲ್ಲಿ ಅಟಲ್ ಜೀ ಅಸ್ಥಿ ವಿಸರ್ಜನೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಅರವಿಂದ ಲಿಂಬಾವಳಿ, ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ.
ನಂತರ ಆಗಸ್ಟ್ 25 ರಂದು ಏಳು ನದಿಗಳಲ್ಲಿ ಅಂದರೆ ನೇತ್ರಾವತಿ ನದಿ, ಮಲಪ್ರಭಾ ನದಿ, ಕೃಷ್ಣಾ ನದಿ, ಕರಾಂಜಾ ನದಿ, ತುಂಗಭದ್ರಾ ನದಿ, ಶರಾವತಿ ಮತ್ತು ತುಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ನೆರವೇರಲಿದೆ.
ಯಾವ ನದಿಯಲ್ಲಿ, ಯಾರಿಂದ ಅಸ್ಥಿ ವಿಸರ್ಜನೆ?
* ನೇತ್ರಾವತಿ ನದಿ- ನೇತ್ರಾವತಿ ನದಿಯಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ ಕಟೀಲು, ಶಾಸಕ ಸಿ.ಟಿ.ರವಿ ತಂಡ ಅಸ್ಥಿ ವಿಸರ್ಜಿಸಲಿದೆ.
* ಮಲಪ್ರಭಾ ನದಿ- ಮಲಪ್ರಭಾ ನದಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಶಾಸಕರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ ತಂಡ ಅಸ್ಥಿ ವಿಸರ್ಜಿಸಲಿದೆ.
* ಕೃಷ್ಣಾ ನದಿ- ಕೃಷ್ಣಾ ನದಿಯಲ್ಲಿ ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಸಂಸದ ಪಿ.ಸಿ.ಗದ್ದಿಗೌಡರ್, ಶಾಸಕ ಗೋವಿಂದ ಕಾರಜೋಳ ಅವರು ಅಸ್ಥಿ ವಿಸರ್ಜನೆ ನೆರವೇರಿಸಲಿದ್ದಾರೆ.
* ಕರಾಂಜಾ ನದಿ- ಕಾರಂಜಾ ನದಿಯಲ್ಲಿ ಮೇಲ್ಮನೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಭಗವಂತ ಖೂಬಾ ತಂಡ ಅಸ್ಥಿ ವಿಸರ್ಜಿಸಲಿದೆ.
* ತುಂಗಭದ್ರಾ ನದಿ- ಬಳ್ಳಾರಿ, ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕ ಬಿ.ಶ್ರೀರಾಮುಲು ಅವರು ಅಸ್ಥಿ ವಿಸರ್ಜನೇ ಕಾರ್ಯ ನೆರವೇರಿಸಲಿದ್ದಾರೆ.
* ಶರಾವತಿ ನದಿ- ಶರಾವತಿ ನದಿಯಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆ.ಜಿ.ನಾಯ್ಕ ತಂಡ ಅಸ್ಥಿ ವಿಸರ್ಜನೆ ಕಾರ್ಯ ನೆರವೇರಿಸಲಿದೆ.
* ತುಂಗಾ ನದಿ- ತುಂಗಾ ನದಿಯಲ್ಲಿ ಶಾಸಕ ಆಯನೂರು ಮಂಜುನಾಥ್, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಅವರು ಈ ಅಸ್ಥಿ ವಿಸರ್ಜನೆ ಕಾರ್ಯವನ್ನು ನೆರವೇರಿಸಲಿದ್ದಾರೆ.