ಈರುಳ್ಳಿ, ಬೆಳ್ಳುಳ್ಳಿ, ಮಾಂಸ ತಿನ್ನಬೇಡಿ ಎಲ್ಲಾ ಉಳಿತಾಯ ಆಗುತ್ತೆ!
ಈರುಳ್ಳಿ ಬಗ್ಗೆ ಹಣಕಾಸು ಸಚಿವರ ಹೇಳಿಕೆ ಈರುಳ್ಳಿ ತಿನ್ನುವುದನ್ನು ನಿಲ್ಲಿಸುವಂತೆ ರಾಷ್ಟ್ರಕ್ಕೆ ಅವರು ನೀಡಿದ ಸಂದೇಶವಾಗಿದೆ ಎಂದು ಆಜಮ್ ಖಾನ್ ಹೇಳಿದ್ದಾರೆ.
ನವದೆಹಲಿ: ಈರುಳ್ಳಿ ಬೆಲೆ ಏರಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಮಾಜವಾದಿ ಪಕ್ಷದ ಮುಖಂಡ ಆಜಮ್ ಖಾನ್ ಈರುಳ್ಳಿ ಸೇವನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಆಜಮ್ ಖಾನ್(Azam khan) ಮಾಧ್ಯಮಗಳೊಂದಿಗೆ ಮಾತನಾಡುತ್ತಾ "ಈರುಳ್ಳಿ ತಿನ್ನುವುದನ್ನು ನಿಲ್ಲಿಸಿ, ಅದನ್ನು ತಿನ್ನಲೇ ಬೇಕು ಎನ್ನುವುದು ಕಡ್ಡಾಯವೇ? ನಮ್ಮ ಜೈನ ಸಹೋದರರು ಅವುಗಳನ್ನು ತಿನ್ನುವುದಿಲ್ಲ. ಈರುಳ್ಳಿ ತಿನ್ನುವುದನ್ನು ನಿಲ್ಲಿಸಿ, ಬೆಳ್ಳುಳ್ಳಿ ತಿನ್ನುವುದನ್ನು ನಿಲ್ಲಿಸಿ, ಮಾಂಸ ತಿನ್ನುವುದನ್ನು ನಿಲ್ಲಿಸಿ, ಎಲ್ಲವೂ ಉಳಿತಾಯವಾಗುತ್ತದೆ" ಎಂದು ತಿಳಿಸಿದ್ದಾರೆ.
"ಈರುಳ್ಳಿ ತಿನ್ನಬೇಡಿ, ಅದು ದುರ್ವಾಸನೆಯನ್ನು ನೀಡುತ್ತದೆ. ಒಮ್ಮೆ ರಾಣಿಯೊಬ್ಬರು 'ಸಾರ್ವಜನಿಕರಿಗೆ ತಿನ್ನಲು ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಲು ಬಿಡಿ' ಎಂದು ಹೇಳಿದ್ದರು" ಎಂದು ಉದಾಹರಣೆ ನೀಡಿದ ಆಜಮ್ ಖಾನ್, ಈರುಳ್ಳಿ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಈರುಳ್ಳಿ ತಿನ್ನುವುದನ್ನು ನಿಲ್ಲಿಸುವಂತೆ ರಾಷ್ಟ್ರಕ್ಕೆ ಅವರು ನೀಡಿದ ಸಂದೇಶ ಎಂದು ತೋರುತ್ತಿದೆ ಎಂದಿದ್ದಾರೆ.
ವಾಸ್ತವವಾಗಿ, ದೇಶಾದ್ಯಂತ ಈರುಳ್ಳಿ ಬೆಲೆ 100 ರೂ. ಗಡಿ ದಾಟಿರುವ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) "ನಾನು ಈರುಳ್ಳಿ-ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುವುದಿಲ್ಲ. ನಾನು ಈರುಳ್ಳಿಯೊಂದಿಗೆ ಹೆಚ್ಚು ಸಂಬಂಧವಿಲ್ಲದ ಅಂತಹ ಕುಟುಂಬದಿಂದ ಬಂದಿದ್ದೇನೆ" ಎಂದು ತಿಳಿಸಿದ್ದರು.
ಇದನ್ನೇ ಗುರಿಯಾಗಿಸಿರುವ ಹಲವು ನಾಯಕರು ತಮ್ಮದೇ ಆದ ಈ ರೀತಿಯ ಕೆಲ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಪಶ್ಚಿಮ ಬಂಗಾಳದ ವಿವಿಧ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 140 ರೂ.ಗೆ ಏರಿದರೆ, ಹೈದರಾಬಾದ್‌ನಲ್ಲಿ ಪ್ರತಿ ಕೆ.ಜಿ.ಗೆ 150 ರೂ. ತಲುಪಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನ, ಹಣಕ್ಕಿಂತ ಈರುಳ್ಳಿ ಕಳ್ಳತನದ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿವೆ. ಇತ್ತೀಚೆಗಷ್ಟೇ, ಮಧ್ಯಪ್ರದೇಶದ ಮಾಂಡ್‌ಸೌರ್‌ನ ರೈತ 30,000 ರೂ. ಮೌಲ್ಯದ ಈರುಳ್ಳಿ ಬೆಳೆಯನ್ನು ಕಳ್ಳರು ಬೇರುಸಹಿತ ಕಿತ್ತೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಭಾರತದ ಹೆಚ್ಚಿನ ನಗರಗಳಲ್ಲಿ ಈರುಳ್ಳಿಯನ್ನು ಪ್ರತಿ ಕೆಜಿಗೆ 100 ರೂ. ಆಗಿದೆ ಎಂದರು.
ವಾಸ್ತವವಾಗಿ ಲೋಕಸಭೆಯಲ್ಲಿ ಈರುಳ್ಳಿ ಬೆಳೆಗಾರರ ವಿಷಯ ಪ್ರಸ್ತಾಪಿಸಿದ್ದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದರಾದ ಸುಪ್ರಿಯಾ ಸೂಲೆ, "ಈರುಳ್ಳಿ(Onion) ಉತ್ಪಾದನೆಯು ಏಕೆ ಕಡಿಮೆಯಾಗಿದೆ? ನಾವು ಅಕ್ಕಿ ಮತ್ತು ಹಾಲು ಮತ್ತು ಇತರ ಅನೇಕ ಉತ್ಪನ್ನಗಳನ್ನು ರಫ್ತು ಮಾಡುತ್ತೇವೆ. ಈರುಳ್ಳಿ ಬೆಳೆಗಾರ ಸಣ್ಣ ರೈತ ಮತ್ತು ಅವನನ್ನು ನಿಜವಾಗಿಯೂ ರಕ್ಷಿಸಬೇಕಾಗಿದೆ" ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸು ಸಚಿವರು, ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಜಾರಿಗೆ ತರುವ ಮೂಲಕ ಈರುಳ್ಳಿ ಬಿಕ್ಕಟ್ಟನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಲೋಕಸಭೆಗೆ ತಿಳಿಸಿದರು. ಏರುತ್ತಿರುವ ಈರುಳ್ಳಿಯ ಬೆಲೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಆಮದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು ಅವುಗಳ ಶೇಖರಣೆಗೆ ಸಂಬಂಧಿಸಿದ ಹಲವಾರು ರಚನಾತ್ಮಕ ಸಮಸ್ಯೆಗಳಿವೆ, ಅದನ್ನು ಸರ್ಕಾರವು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
2019-20ನೇ ಸಾಲಿನ ಅನುದಾನದ ಪೂರಕ ಬೇಡಿಕೆಗಳ ಚರ್ಚೆಗೆ ಉತ್ತರಿಸಿದ ಅವರು, ಈರುಳ್ಳಿ ರಫ್ತು ನಿಷೇಧಿಸಲಾಗಿದೆ ಮತ್ತು ಅದರ ಆಮದುಗಾಗಿ ಟೆಂಡರ್ ಮಾಡಲಾಗಿದೆ. "ಸಂಗ್ರಹಣೆ ಹೊರತುಪಡಿಸಿ ಬೇರೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ತಿಳಿಸಿದರು.