ಗೋವಾ ನೂತನ ಸಿಎಂ ಪ್ರಮೋದ್ ಸಾವಂತ್, ಮನೋಹರ್ ಪರ್ರಿಕರ್ ಬಗೆಗೆ ಹೇಳಿದ ಮಾತು!
ಗೋವಾದ ನೂತನ ಮುಖ್ಯಮಂತ್ರಿಯಾಗಿರುವ ಪ್ರಮೋದ್ ಸಾವಂತ್ ತಮ್ಮನ್ನು ರಾಜಕಾರಣಕ್ಕೆ ಕರೆತಂದದ್ದು ಮನೋಹರ್ ಪರ್ರಿಕರ್ ಎಂದು ನೆನೆದಿದ್ದಾರೆ.
ಪಣಜಿ: ಅನಾರೋಗ್ಯದಿಂದಾಗಿ ಭಾನುವಾರ ಇಹಲೋಕ ತ್ಯಜಿಸಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ಅಂತ್ಯ ಕ್ರಿಯೆ ಸೋಮವಾರ ನೆರವೇರಿತು. ಪರ್ರಿಕರ್ ನಿಧನದಿಂದ ತೆರವಾಗಿದ್ದ ಸಿಎಂ ಸ್ಥಾನಕ್ಕೆ ಪ್ರಮೋದ್ ಸಾವಂತ್ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿತು.
ತಡರಾತ್ರಿ 1:50 ರ ವೇಳೆಗೆ ಗವರ್ನರ್ ಮೃದುಲಾ ಸಿನ್ಹಾ ಅವರು ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಪ್ರಮೋದ್ ಸಾವಂತ್, ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ದಿವಂಗತ ಮನೋಹರ್ ಪರ್ರಿಕರ್ ಅವರ ಬಗೆಗೆ ನುಡಿದ ಮಾತುಗಳಿವು.... 'ಮನೋಹರ್ ಪರ್ರಿಕರ್ ನನನ್ನು ರಾಜಕೀಯಕ್ಕೆ ಕರೆತಂದರು. ನಾನು ಬಹುಶಃ ಮನೋಹರ್ ಪರ್ರಿಕರ್ ಅವರ ಮಟ್ಟಕ್ಕೆ ಕೆಲಸ ಮಾಡದೇ ಇರಬಹುದು. ಆದರೆ ನನ್ನ ಶಕ್ತಿ ಮೀರಿ ಗೋವಾ ಜನತೆಗಾಗಿ, ಗೋವಾದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ' ಎಂದು ಹೇಳಿದ್ದಾರೆ.