ಬಿಹಾರ ಅಸೆಂಬ್ಲಿ ಚುನಾವಣೆ 2020 : ಎರಡನೇ ಹಂತಕ್ಕೆ ನಾಳೆ ಮತದಾನ
ಬಿಹಾರ ವಿಧಾನ ಸಭೆ ಚುನಾವಣೆ ನಿರ್ಣಾಯಕ ಘಟ್ಟ ಪ್ರವೇಶಿಸಿದೆ. ಮಂಗಳವಾರ ಎರಡನೇ ಹಂತದ ಮತದಾನ ನಡೆಯಲಿದೆ. 94 ಕ್ಷೇತ್ರಗಳಲ್ಲಿಎರಡನೇ ಹಂತದ ಮತದಾನ ನಡೆಯಲಿದೆ.
ಪಾಟ್ನಾ : ಬಿಹಾರ ವಿಧಾನಸಭೆ ಚುನಾವಣೆ (Bihar assembly election) ನಿರ್ಣಾಯಕ ಘಟ್ಟ ಪ್ರವೇಶಿಸಿದೆ. ಮಂಗಳವಾರ ಎರಡನೇ ಹಂತದ (second phase) ಮತದಾನ ನಡೆಯಲಿದೆ. 17 ಜಿಲ್ಲೆಗಳಲ್ಲಿರುವ 94 ಕ್ಷೇತ್ರಗಳಲ್ಲಿಎರಡನೇ ಹಂತದ ಮತದಾನ ನಡೆಯಲಿದೆ. ಬಿಹಾರದಲ್ಲಿ ಮುಂದಿನ ಸರಕಾರ ಯಾರದ್ದು ಅನ್ನೋದನ್ನ ಈ ಹಂತವೇ ನಿರ್ಧರಿಸಲಿದ್ದು 2.86 ಕೋಟಿ ಮತದಾರರು 1463 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಮತದಾನಕ್ಕೆ ಸಿದ್ದತೆ ಹೇಗಿದೆ ಗೊತ್ತಾ..?
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಸಂಜೆಯ 6 ಗಂಟೆಯ ತನಕ ವೋಟಿಂಗ್ ಮಾಡಬಹುದಾಗಿದೆ. ಕೋವಿಡ್-19 (Covid 19) ಕಾರಣದಿಂದಾಗಿ ಈ ಬಾರಿ ಮತದಾನಕ್ಕೆ 1 ಗಂಟೆ ಹೆಚ್ಚುವರಿ ಅವಧಿ ನೀಡಲಾಗಿದೆ. ಮತದಾನ ಸಂದರ್ಭದಲ್ಲಿ ಕೊವಿಡ್ ಮಾರ್ಗಸೂಚಿ ಅನುಸರಿಸುವುದು ಕಡ್ಡಾಯವಾಗಿದೆ. ಹಾಗಾಗಿ ಎಲ್ಲಾ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಎಲ್ಲಾ ಮತಗಟ್ಟೆಗಳಲ್ಲೂ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. 80 ವರ್ಷಕ್ಕೂ ಹೆಚ್ಚಿನವರಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದೆ.
65 ವರ್ಷಕ್ಕೂ ಅಧಿಕ ವಯಸ್ಸಿನ ಕೊರೊನಾ ರೋಗಿಗಳಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ
ಪಕ್ಷಗಳ ಸ್ಪರ್ಧೆ ಎಲ್ಲೆಲ್ಲಿ..?
ಬಿಜೆಪಿ (BJP) 46 ಕ್ಷೇತ್ರಗಳಲ್ಲಿ ಅದರ ಮಿತ್ರ ಪಕ್ಷ ಜೆಡಿಯು 43 ಕ್ಷೇತ್ರಗಳಲ್ಲಿ ಅಖಾಡಕ್ಕಿಳಿದಿದೆ. ಮತ್ತೊಂದು ಮಿತ್ರ ಪಕ್ಷ ವಿಐಪಿ 5 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಇನ್ನು ಮಹಾಘಟಬಂಧನ್ ವಿಷಯಕ್ಕೆ ಬಂದರೆ, ಆರ್ ಜೆಡಿ (RJD) 56, ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಸಿಪಿಐಎಂಎಲ್ 6 ಕ್ಷೇತ್ರ, ಸಿಪಿಎಂ ಮತ್ತು ಸಿಪಿಐ ತಲಾ 4 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷಿಸುತ್ತಿದೆ.
ಲಾಲೂ ಪುತ್ರರಿಗೆ ಅಗ್ನಿ ಪರೀಕ್ಷೆ!
ಮುಖ್ಯವಾಗಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರ ಇಬ್ಬರು ಪುತ್ರರಾದ ತೇಜಸ್ವಿ ಯಾದವ್ (Tejashwi Yadav) ಮತ್ತು ತೇಜ್ ಪ್ರತಾಪ್ ಯಾದವ್ (Tej Pratap Yadav) ರಾಜಕೀಯ ಭವಿಷ್ಯವನ್ನೂ ಮತದಾರರು ಮಂಗಳವಾರ ನಿರ್ಧರಿಸಲಿದ್ದಾರೆ.
ಶಿರಾ, ಆರ್ ಆರ್ ನಗರ ಉಪಚುನಾವಣೆ – ನಾಳೆ ಮತದಾನ, ಕ್ಷೇತ್ರದಲ್ಲಿ ಮದ್ಯ ಮಾರಾಟ ಬಂದ್
ಪ್ರತಿಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ರಘೋಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಪಾರಂಪರಿಕವಾಗಿ ಆರ್ ಜೆಡಿ ಭದ್ರಕೋಟೆಯೂ ಹೌದು. 1995, 2000ರ ಚುನಾವಣೆಯಲ್ಲಿ ಲಾಲೂ ಯಾದವ್ ಇಲ್ಲಿ ಗೆದ್ದಿದ್ದರು. 2005ರಲ್ಲಿ ಲಾಲೂ ಯಾದವ್ ಪತ್ನಿ ರಾಬ್ಡಿ ದೇವಿಗೆ ಈ ಕ್ಷೇತ್ರ ಒಲಿದಿತ್ತು. 2010ರಲ್ಲಿ ರಾಬ್ಡಿ ದೇವಿಗೆ ಸೋಲಿನ ರುಚಿ ಸಿಕ್ಕಿದ್ದು ಇದೇ ಕ್ಷೇತ್ರದಲ್ಲಿ. ಅಂದು ಬಿಜೆಪಿಯ ಸತೀಶ್ ರಾಯ್ ಇಲ್ಲಿಂದ ಆಯ್ಕೆಯಾಗಿದ್ದರು. ಈಗ ತೇಜಸ್ವಿ ಯಾದವ್ ಅವರ ಎದುರಾಳಿಯೂ ಸತೀಶ್ ರಾಯ್ ಆಗಿದ್ದಾರೆ.
ತೇಜಸ್ವಿ ಯಾದವ್ ಅಣ್ಣ ತೇಜ್ ಪ್ರತಾಪ್ ಯಾದವ್ ಸಮಸ್ತಿಪುರದ ಹಸನ್ ಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ. ತೇಜ್ ಪ್ರತಾಪ್ 2015ರಲ್ಲಿ ಮಹುವಾ ಕ್ಷೇತ್ರದಿಂದ ಅಸೆಂಬ್ಲಿಗೆ ಆಯ್ಕೆಯಾಗಿದ್ದರು. ಈ ಸಲ ಕ್ಷೇತ್ರ ಬದಲಾಯಿಸಿದ್ದಾರೆ. ಇಲ್ಲಿ ಯಾದವ ಸಮುದಾಯದ ಮತ ಸಾಕಷ್ಟಿದೆ. ಜೊತೆಗೆ ಇದು ಆರ್ ಜೆಡಿ ಭದ್ರಕೋಟೆಯೂ ಹೌದು. ಪಾಟ್ನಾ ಸಾಹೀಬ್ ಕ್ಷೇತ್ರ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ. ಇಲ್ಲಿಂದ ಬಿಜೆಪಿ ಮಂತ್ರಿ ನಂದ ಕಿಶೋರ್ ಯಾದವ್ ಸತತ ಏಳನೇ ಸಲ ಅಸೆಂಬ್ಲಿಗೆ ಮರು ಆಯ್ಕೆ ಬಯಸಿದ್ದಾರೆ.
ಅಕ್ಟೋಬರ್ 28ರಂದು ಮೊದಲ ಹಂತದ ಮತದಾನ ನಡೆದಿತ್ತು. ಮೂರನೇ ಹಂತದ ಮತದಾನ ನವೆಂಬರ್ 7 ರಂದು ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಹಾರ ವಿಧಾನಸಭೆಯ ಒಟ್ಟು 243 ಕ್ಷೇತ್ರಗಳಲ್ಲಿ ಜನತಾ ಜನಾರ್ಧನ ಯಾರ ಕೈ ಹಿಡಿಯಲಿದ್ದಾರೆ? ಬಿಹಾರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.