ಬೆಂಗಳೂರು : ರಾಜಕೀಯ ಜಿದ್ದಾಜಿದ್ದಿಯ ಕಾರಣ ರಾಜ್ಯದ ಕುತೂಹಲದ ಕೇಂದ್ರವಾಗಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರು ನಗರದ ಆರ್ಆರ್ ನಗರ ವಿಧಾನಸಭಾ ಕ್ಷೇತ್ರಗಳ (Sira, R R Nagar constituencies)ಉಪಚುನಾವಣೆ ಮತದಾನ ಮಂಗಳವಾರ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಭಾನುವಾರವೇ ತೆರೆ ಬಿದ್ದಿದೆ. ಮತದಾನಕ್ಕೆ (Voting) ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ, ಮನೆ ಮನೆ ತೆರಳಿ ಮತದಾರರ ಮನವೊಲಿಸುವ ಪ್ರಯತ್ನ ಬಿರುಸಿನಿಂದ ಸಾಗಿದೆ.
ಶಿರಾ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಜೆಡಿಎಸ್ (JDS) ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ . ಬಿ. ಜಯಚಂದ್ರ, ಬಿಜೆಪಿ ಉಮೇದುದಾರರಾಗಿ ಡಾ. ರಾಜೆಶ್ ಗೌಡ ಅಖಾಡದಲ್ಲಿದ್ದಾರೆ. ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರಿಂದಲೇ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆದಿತ್ತು. ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa), ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda), ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತಬೇಟೆ ನಡೆಸಿದ್ದರು.
ಮುನಿರತ್ನ ಅವರ ನಿಜ ಸ್ವರೂಪ ನಮಗೆ ತಡವಾಗಿ ಅರಿವಾಗಿದೆ-ಡಿ.ಕೆ ಶಿವಕುಮಾರ್
ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ಮತ್ತೊಂದು ಕ್ಷೇತ್ರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ (RR Nagar Assembly constituency) ಬಿಜೆಪಿ ಅಭ್ಯರ್ಥಿ ಮುನಿರತ್ನ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮುನಿರತ್ನಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಪ್ರಬಲ ಸವಾಲು ಒಡ್ಡಿದ್ದಾರೆ. ಜೆಡಿಎಸ್ ನ ವಿ. ಕೃಷ್ಣ ಮೂರ್ತಿ ಕೂಡಾ ಗೆಲುವಿಗಾಗಿ ಹರಸಾಹಸ ಪಡುತ್ತಿದ್ದಾರೆ. ದಿಗ್ಗಜ ನಾಯಕರಾದ ಯಡಿಯೂರಪ್ಪ, ಸಿದ್ದರಾಮಯ್ಯ (Siddaramaiah), ದೇವೇಗೌಡ, ಕುಮಾರಸ್ವಾಮಿ ಪ್ರಚಾರದಿಂದಾಗಿ ಆರ್ ಆರ್ ನಗರ ಕೂಡಾ ರಂಗೇರಿತ್ತು. ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಮತದಾರರಲ್ಲದವರು ಕ್ಷೇತ್ರ ಬಿಟ್ಟು ಹೋಗಬೇಕಾಗಿದೆ. ಹಾಗಾಗಿ ಅಭ್ಯರ್ಥಿಗಳೇ ಸ್ಥಳೀಯ ಕಾರ್ಯಕರ್ತರ ನೆರವಿನಿಂದ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತಿದ್ದಾರೆ. ಬೆಳಗ್ಗಿನಿಂದಲೇ ಮನೆ ಮನೆ ಪ್ರಚಾರ ಬಿರುಸಿನಿಂದ ಸಾಗಿದೆ.
ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಅಂತ ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ-ಸಿದ್ದರಾಮಯ್ಯ
ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭ, ನವೆಂಬರ್ ಹತ್ತರಂದು ಫಲಿತಾಂಶ ಪ್ರಕಟ:
ಕೋವಿಡ್-19 (Covid 19) ಮಹಾಮಾರಿಯ ನಡುವೆ ನಡೆಯುತ್ತಿರುವ ಉಪಚುನಾವಣೆ ಇದಾಗಿದ್ದು, ಚುನಾವಣಾ ಆಯೋಗ ಹಲವಾರು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹಾಗಾಗಿ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕಾಗಿದೆ. ಥರ್ಮಲ್ ಸ್ಕ್ಯಾನರ್, ಸಾನಿಟೈಸರ್ ಮುಂತಾದ ಅಗತ್ಯ ಪರಿಕರಗಳನ್ನು ಮತಗಟ್ಟೆಗಳಿಗೆ ಸಾಗಿಸಲಾಗಿದೆ. ಭಾರೀ ಭದ್ರತೆಯ ನಡುವೆ ಮತಯಂತ್ರಗಳನ್ನೂ ಮತಗಟ್ಟೆಗಳಿಗೆ ಸಾಗಿಸಲಾಗಿದೆ. ಸುರಕ್ಷಿತ, ಶಾಂತಿಯುತ ಮತದಾನಕ್ಕಾಗಿ ಎರಡೂ ಕ್ಷೇತ್ರಗಳು ಸಜ್ಜುಗೊಳ್ಳುತ್ತಿವೆ. ನವೆಂಬರ್ 3ರ ತನಕ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.